Thursday, June 25, 2009

ಸಾವಿನ ಸನಿಹ.........

ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಇದು ಗಾದೆ. ಆದರೆ ನಮ್ಮಿಬ್ಬರ ಜಗಳ ಶುರು ಆಗಿದ್ದೇ ಊಟ ಮುಗಿದಮೇಲೆ.

"ನಾಳೆ ಮತ್ತೆ ಅಲ್ಲಿಗೆ ಹೋಗೊದಾ? ನಾನಂತೂ ಬರುವುದಿಲ್ಲ. ಹೇಗೂ ನಮ್ಮ ಕಾರಿನಲ್ಲಿ ನಾವೇ ಮೂರು ಜನ. ಬೇರೆ ಎಲ್ಲಾದರೂ ಹೋಗೋಣ. ಇಲ್ಲಿ ಇಸ್ಕಾನ್ ಅವರದ್ದು ದೇವಸ್ಥಾನ ಚೆನ್ನಾಗಿದೆಯಂತೆ, ಇಲ್ಲಾಂದ್ರೆ ಎಲ್ಲೋ ನಲವತ್ತು ಮೈಲ್ ದೂರದಲ್ಲಿ ಗುಹೆಗಳಿದೆಯಂತೆ. ಅದನ್ನು ನೋಡೊಣ. ಮತ್ತೆ ಆಸ್ಟೀನಿಗೆ ಬರೋದಕ್ಕೆ ಸಾಧ್ಯ ಇಲ್ಲ, ಬಂದಾಗ್ಲೇ ನೋಡಿಕೊಂಡು ಹೋಗಬೇಕು. ಮತ್ತೆ ಬೊಟಿಂಗಿಗೆ ನಾನಂತೂ ಬರೋಲ್ಲ. ಈ ಬ್ಯಾಚ್ಯುಲರ್ಸ್ ಎಲ್ಲರನ್ನೂ ಕಟ್ಟಿಕೊಂಡು ಬಂದಿದ್ದಿರಿ, ಅವರ ಇಂಟರೆಸ್ಟೇ ಬೇರೆ, ನಮ್ಮ ಇಂಟರೆಸ್ಟೇ ಬೇರೆ" ನಾನು ಗೊಣಗಿದ್ದೆ.


"ಅಯ್ಯೋ ರಾಮಾ, ಬೆಳಗಿನಿಂದ ಬಿಸಿಲಲ್ಲಿ ತಿರಗಿ, ಮುನ್ನೂರು ಕಿ.ಮೀ ಡ್ರೈವ್ ಮಾಡಿ ಸುಸ್ತಾಗಿದೆ. ತಲೆ ಸಿಡಿದು ಹೋಗ್ತಾ ಇದೆ. ಇದರ ಮಧ್ಯ ನಿಂದು ಬೇರೆ." ಗಣಪತಿ ಕುಟಿಕಿದ.

ರೆಸ್ಟೋರೆಂಟಿನಲ್ಲಿ ತಿಂದಿದ್ದು ಕೇವಲ ನಾನೂರು ರೂಪಾಯಿ, ಬಿಲ್ಲ್ ಕಕ್ಕಿದ್ದು ಸಾವಿರದ ನಾನೂರು. ಚಿಕನ್, ಮಟನ್ ಅಂತ ದಕ್ಕಿಸಿ ತಿಂದದ್ದು ಅವರು, ಬಿಲ್ಲ್ ಮಾತ್ರ ಸಮಪಾಲು. ಹಾಳಾದೊಳು, ಬಿಲ್ಲನ್ನು ಗಣಪತಿ ಮುಂದೆ ತಂದಿಡಬೇಕಾ! ನನ್ನ ಅಕೌಂಟಿನಲ್ಲಿ ದುಡ್ಡಿಲ್ಲ, ನೀವೇ ಯಾರದ್ರೂ ಕೊಡರಪ್ಪಾ, ಆಮೇಲೆ ಹಂಚಿಕೊಳ್ಳೊಣ ಎನ್ನೊದು ಬಿಟ್ಟು ತೆತ್ತು ಬಂದಿದ್ದಾರೆ ಹದಿನೈದು ಸಾವಿರನ, ಎಲ್ಲರೂ ವಾಪಸ್ ಕೊಡ್ತಾರೋ ಬಿಡ್ತಾರೋ? ಹೊಟ್ಟೆ ಉರಿಯೊಂದಿಗೆ ಹಾಸಿಗೆಲ್ಲಿ ಬಿದ್ದುಕೊಂಡೆ.


ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಬರುವದೊರಳಗೆ ಗಣಪತಿ ಎದ್ದಿದ್ದ. "ಅವರಿಗೆಲ್ಲಾ ಫೋನ್ ಮಾಡಿದೇ, ಆದ್ರೆ ಯಾರ ಹತ್ತಿರಾನೂ ಜಿ.ಪಿ.ಸ್ ಇಲ್ಲ. ಅದ್ಕೆ ಅವರಿಗೆ ಹೋಗೊದಕ್ಕೆ ದಾರಿ ಗೊತ್ತಾಗಲ್ವಂತೆ, ಮತ್ತೇನು ಮಾಡೋದು? ನಾವು ಅಲ್ಲಿಗೆ ಹೋಗೋಣ ಬಿಡು." ಎಂದ.


ನನಗೆ ಮೈಯಲ್ಲಾ ಉರಿದು ಹೋಯ್ತು."ಏನು ಬ್ಯಾಚ್ಯುಲರ್ಸೊ ಏನೋ? ಬೇಕಾಬಿಟ್ಟಿ ದುಡ್ದು ಕರ್ಚು ಮಾಡ್ತಾರೆ ಒಂದು ಜಿ.ಪಿ.ಸ್ ಕೊಳ್ಳೊದಕ್ಕೆ ಆಗಲ್ವ? "ಎಲ್ಲರೂ ಸ್ನ್ಯಾಕ್ಸ್ ತರಬೇಕು" ಅಂತ ಅಷ್ಟು ದೊಡ್ಡದಾಗಿ ಟ್ರಿಪ್ ಪ್ಲಾನ್ ಮೇಲಿನಲ್ಲಿ ಬರೆದಿದ್ದಿರಿ! ಒಂದು ಡಾಲರ್ ಬಿಸಾಕಿದ್ರೂ ದೊಡ್ಡ ಪ್ಯಾಕೆ ಸಿಗೋದು, ಒಬ್ಬರಾದ್ರೂ ತಂದಿದ್ದಾರ? ನಾನು ನಿದ್ದೆಗೆಟ್ಟು ಚಕ್ಕಲಿ, ಕೊಡಬಳೆ ಮಾಡಿದ್ದೇ ಬಂತು."


"ಏನಿವತ್ತು ಆ ಬ್ಯಾಚುಲರ್ಸ್ ಮಾಡಿದ್ದೆಲ್ಲ ತಪ್ಪಾಗೆ ಕಾಣ್ತಾ ಇದೆ ನಿನಗೆ. ಮನುಷ್ಯ ಸಮಾಜ ಜೀವಿ. ಎಲ್ಲರ ಜೊತೆಗೆ ಬಂದಮೇಲೆ ಎಲ್ಲರಜೊತೆ ಹೊಂದಿಕೊಳ್ಳೊದನ್ನೂ ಕಲಿತ್ಕೊಬೇಕು. ಎಲ್ಲ ಕಡೆನೂ ನಮ್ಮ ಹಠನೇ ಆಕ್ಬೇಕು ಎನ್ನೋದನ್ನು ಬಿಡು."ಗಣಪತಿಯ ಈ ಮಾತಿಗೆ ನಾನು ಕೆಂಡಾಮಂಡಲವಾಗಿ ಹೋದೆ. ನನ್ನ ಈಗೋ ಕ್ಕೆ ಪೆಟ್ಟು ಬಿದ್ದಿತ್ತು. ಗಣಪತಿಯಮೇಲೂ ಸಿಟ್ಟು ಬಂದಿತ್ತು. ಅಲ್ಲಿಗೆ ಮಾತು ಕತೆ ಬಂದ ಆಗಿತ್ತು.


ರೂಂ ಖಾಲಿ ಮಾಡಿ ಕೆಳಗಡೆ ಬಂದೆವು. ಅಲ್ಲಿ ನಿಷಾ ಕಾಯುತ್ತ ನಿಂತಿದ್ದಳು."ಬೋಟಿಂಗಿಗೆ ಎಷ್ಟು ಜನ ಟಿಕೆಟ್ ಬುಕ್ ಮಾಡಿದ್ದೀರಿ?" ನಾನು ಕೇಳಿದೆ."ಒಟ್ಟು ಮೂರು ಟಿಕೆಟ್ ಬುಕ್ ಮಾಡಿದ್ದೇವೆ, ಎಲ್ಲರಿಂದ ಸೇರಿ" ಅವಳೆಂದಳು.ಓಹೋ ನಾವು ಹತ್ತದೇ ಇದ್ರೂ ಹಣ ಶೇರ್ ಮಾಡ್ಲೇ ಬೇಕು. ಹಾಗಾದ್ರೆ ಯಾಕೆ ಬಿಡ್ಲಿ? ನಾನು ಹತ್ತೇ ಬಿಡ್ತಿನಿ. ಆಗ್ಲೇ ತೀರ್ಮಾನಿಸಿಬಿಟ್ಟಿದ್ದೆ.ಸರಿ ಅಲ್ಲಿಂದ ಹೊರಟು ವೆಲ್ಲಿಂಗಟನ್ ಬೀಚಿಗೆ(ಆ ಕೆರೆಯ ಹೆಸರು) ಬಂದದ್ದಾಯಿತು.


ಪ್ರತಿಯೊಬ್ಬರಿಗೂ ಇಪ್ಪತ್ತು ನಿಮಿಷದ ಬಾರಿ ಬರುವುದೆಂದು ತೀರ್ಮಾನಿಸಿದೆವು. ಅದು ಸಮುದ್ರವೋ,ಕೆರೆಯೋ ಎಂದು ಗೊತ್ತಾಗದಷ್ಟು ದೊಡ್ದದಿತ್ತು. ಇಲ್ಲಿ ಜೆಟ್-ಸ್ಕೀ ಹತ್ತುವುದೇ ಒಂದು ಮಜ. ಸ್ಕೂಟಿಯ ತರ ಇಬ್ಬರು ಕುಳಿತುಕೊಳ್ಳಬಹುದಾದ ಈ ಬೋಟ್ ನಾವು ಓಡಿಸಿದಷ್ಟು ವೇಗವಾಗಿ ಓಡುತ್ತದೆ.

"ನನ್ನಿಂದ ಆ ಜೆಟ್-ಸ್ಕೀ ಓಡಿಸಲು ಸಾಧ್ಯವಿಲ್ಲ ನಾನು ಹಿಂದುಗಡೆ ಕೂರುತ್ತೇನೆ" ಎಂದೆ."ನನಗೆ ಆ ಜೆಟ್-ಸ್ಕೀ ಓಡಿಸೋಕೆ ಭಯ ಕಣೆ, ನೀನು ಬೇರೆ ಯಾರ ಜೊತೆಗಾದ್ರೂ ಹೋಗು." ಆಗಷ್ಟೇ ಅದರಲ್ಲಿ ಸುತ್ತಿಬಂದಿದ್ದ ಗಣಪತಿ ಸುಸ್ತಾಗಿದ್ದ.ಸರಿ ಯಾರೋ ಗಣಪತಿಯ ಕಲೀಗ್, ಒಟ್ಟಾರೆ ನನಗೆ ಆ ಜೆಟ್-ಸ್ಕೀ ನಲ್ಲಿ ಎರಡು ರೌಂಡ್ ಸುತ್ತಬೇಕಿತ್ತು.ಹೊರಟೆ.


ಇದರಲ್ಲಿ ಕುಳಿತುಕೊಳ್ಳುವವರೆಲ್ಲರೂ ಕಡ್ಡಾಯವಾಗಿ ಲೈಫ಼್ ಜಾಕೆಟ್ ಹಾಕಿ ಕೊಳ್ಳಲೇ ಬೇಕು. ನನಗೇನು ಆ ಜಾಕೆಟ್ ಮೇಲೆ ಭರವಸೆ ಇರಲಿಲ್ಲ. ನಮ್ಮ ಬೋಟ್ ಸ್ಪೀಡಾಗಿ ಹೊರಟಿತ್ತು. ಆ ಸ್ಪೀಡಿಗೆ ನೀರು ಮುಖಕ್ಕೆ ರಾಚಿ ಕಣ್ಣು ತೆರೆಯುವದೇ ಕಷ್ಟವಾಗಿತ್ತು. ದಡದಿಂದ ತುಂಬಾ ದೂರ ಬಂದು ಬಿಟ್ಟಿದ್ದೆವು. ಎಲ್ಲಿ ನೋಡಿದರೂ ನೀರೆ. ಅಷ್ಟರಲ್ಲೇ ಆಯಿತೊಂದು ಘಟನೆ. ಒಂದೇ ಸಾರಿ ಹೆಚ್ಚಿದ ವೇಗಕ್ಕೆ ನಾನು ಹಿಂದುಗಡೆ ವಾಲಿದೆ.

"ಅಯ್ಯೋ ರಾಮಾ ಏನಾಗ್ತಾ ಇದೆ, ನಾನು ನೀರಿಗೆ ಬೀಳ್ತಾ ಇದ್ದೀನಿ, ಅದು ನೂರೈವತ್ತು ಅಡಿ ಆಳ" ಆಧಾರಕ್ಕೆ ಮುಂದಿದ್ದವರ ಲೈಫ್ ಜಾಕೆಟ್ ಹಿಡಿದಿದ್ದೆ. ಪರಿಣಾಮ ಇಬ್ಬರೂ ನೀರಲ್ಲಿ ಬಿದ್ದೆವು.

"ಓ ಗಾಡ್, ನಾನು ನೀರಿನ ಆಳಕ್ಕೆ ಮತ್ತೂ ಆಳಕ್ಕೆ ಹೋಕ್ತಾ ಇದ್ದಿನಿ.... ಈ ಲೈಫ್ ಜಾಕೆಟ್ ಪ್ರಯೋಜನಕ್ಕೆ ಬರ್ತಾ ಇಲ್ವೇ? ನಾನು ಎಲ್ಲರನ್ನೂ ಬಿಟ್ಟು ಅಮೇರಿಕದಲ್ಲಿ ಸಾಯ್ತಾ ಇದ್ದಿನಾ? ಕಂದಾ ನಿನಗಿನ್ನೂ ಅಮ್ಮಾ ಇಲ್ಲ. ನೀನು ತಬ್ಬಲಿ ಆಗ್ತಾ ಇದ್ದಿಯ..." ಹತ್ತೇ ಸೆಕೆಂಡುಗಳಲ್ಲಿ ನನ್ನ ಮನಸ್ಸು ಇದನ್ನೇಲ್ಲಾ ಯೋಚನೇ ಮಾಡಿತ್ತು. ಎರಡು ಅಡಿ ಆಳಕ್ಕೆ ಹೋದವನು ಮತ್ತೆ ಮೇಲಕ್ಕೆ ಬಂದೆ. ಅಲ್ಪ ಸ್ವಲ್ಪ ಈಜು ಕಲಿತಿದ್ದರಿಂದ ಕೈ-ಕಾಲು ಬಡಿಯತೊಡಗಿದೆ. ಅವರು ನೀರಿನಲ್ಲಿ ಮುಳುಗೆದ್ದರು.

"ಹೆಲ್ಪ್....ಹೆಲ್ಪ್...." ಕೂಗಿದೆವು.ಅಲ್ಲಿ ಯಾರಾದರೂ ಇದ್ದರೆ ತಾನೆ ಬರುವುದಕ್ಕೆ.....ಅಯ್ಯೋ ನಾನು ಈಗ ಸಾಯ್ತಾ ಇದ್ದೀನಾ? ಹೆದರಿಕೆಯಲ್ಲೇ ಕೈ-ಕಾಲು ಬಡಿಯುತ್ತಿದ್ದೆ. ಲೈಫ್ ಜಾಕೆಟ್ ನನ್ನನ್ನು ತೇಲಿಸುತ್ತಿತ್ತು. ಆದರೂ ಕೆಳಗಡೆ ನೂರೈವತ್ತು ಅಡಿ ಆಳ ನೀರಿತ್ತು. ನಮ್ಮನ್ನು ಬೀಳಿಸಿದ ಬೊಟ್ ಅಲ್ಲೇ ಮೂವತ್ತು ಅಡಿ ದೂರ ಹೋಗಿ ನಿಂತಿತ್ತು.

"ಓ ಬೋಟ್ ಅಲ್ಲೇ ಇದೆ ಬನ್ನಿ ಹೋಗೊಣ" ಹೇಗೋ..ಅಲ್ಲಿಯವರೆಗೆ ಕೈಕಾಲು ಬಡಿಯುತ್ತಾ ಹೋದೆವು. ಬೋಟನ್ನು ಗಟ್ಟಿಯಾಗಿ ಹಿಡಿದುಕೊಂಡೆ ಆದರೆ ಮೇಲೇರಲಾಗುತ್ತಿಲ್ಲ.

ದೂರದಲ್ಲೊಂದು ಬೋಟ್. "ಹೆಲ್ಪ್...ಹೆಲ್ಪ್...." ಮತ್ತೆ ಕೂಗಿದೆವು. ಈಗ ಅವರೂ ಬಂದು ಸಹಾಯ ಮಾಡಿದರು.ಬದುಕಿದೆಯಾ...ಬಡ ಜೀವವೇ.....ಖುಶಿಗೆ ಅಳು ಬಂದುಬಿಟ್ಟಿತ್ತು.

ಹೀಗಾಯಿತೆಂದು ಗಣಪತಿಗೆ ಹೇಳಿದಾಗ ತಣ್ಣಗಾಗಿಬಿಟ್ಟ. ಇಬ್ಬರ ಕೋಪ-ತಾಪಗಳು ತಣ್ಣಗಾಗಿದ್ದವು. "ಏನೋ ಏಲ್ಲರೂ ಕುಳಿತುಕೊಂಡು ಹೋಗುವ ದೊಡ್ಡ ಬೋಟ್ ಬುಕ್ ಮಾಡ್ತಾರೆ ಅಂದ್ಕೊಂಡ್ರೆ...ಈ ಹುಡುಗರು ಜೆಟ್-ಸ್ಕೀ ಬುಕ್ ಮಾಡಿದ್ದಾರೆ. ಇನ್ನು ಬರುವದಾದ್ರೆ ಯರಾದ್ರೂ..ಫ್ಯಾಮಿಲಿಗಳ ಜೊತೆ ಬರಬೇಕು" ಎಂದು ಗಣಪತಿಯ ಬಾಯಲ್ಲೂ ಬಂದಿತ್ತು.

ಈಗಲೂ ಯೋಚಿಸುತ್ತೇನೆ, ಏನಾದ್ರೂ ನಾನು ಮುಳುಗಿ ಹೋಗಿದ್ರೆ......"ಅಮೇರಿಕಾದ ಟೆಕ್ಸಾಸನಲ್ಲಿ ಕರ್ನಾಟಕದ ಮಹಿಳೆಯೊಬ್ಬಳು ಬೋಟಿನಿಂದ ಬಿದ್ದು ಸಾವಿಗೀಡಾಗಿದ್ದಾಳೆ. ಮೃತಳು ಪತಿ, ಒಬ್ಬ ಮಗ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾಳೆ." ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿತ್ತು.

9 comments:

 1. Eye stupid..nothing is gonna happen if u wore Life Jacket. U know life jacket can make u float..for more than 120 Hours,..but only thing is u need to know how to float.

  But dont bet your life..just becouse of u are also paying equal share,

  ReplyDelete
 2. ತು೦ಬಾ ಚೆನ್ನಾಗಿ ಬರದಿದ್ದೀರಿ ಅಕ್ಕಾ, ಅರ್ಥಪೂರ್ಣ ಹಾಗೂ ಸಾ೦ರ್ಧಭಿಕ ಸಾಹಿತ್ಯದ ಪರಿಪೂರ್ಣ ಬಳಕೆಯಾಗಿದೆ, ಓದೋಕೆ ಬಹಳ ಮಜವಾಗಿದೆ, "ಅಮೇರಿಕಾದ ಟೆಕ್ಸಾಸನಲ್ಲಿ ಕರ್ನಾಟಕದ ಮಹಿಳೆಯೊಬ್ಬಳು ಬೋಟಿನಿಂದ ಬಿದ್ದು ಸಾವಿಗೀಡಾಗುವುದು" ನೂರಕ್ಕೆ ನೂರರಷ್ಟು ಸತ್ಯಕ್ಕೆ ದೂರವಾದ ಯೋಚನೆ...ಏನೂ ಆಗೊದಿಲ್ಲ ಮಜಾ ಮಾಡಿ....ಬ್ಯಾಚ್ಯುಲರ್ಸ್ ಗಿ೦ತಾ ಫ್ಯಾಮಿಲಿ ಜೊತೆ ಹೋಗೋದೆ ಹೆಚ್ಚು ಸುರಕ್ಷಿತ ಅನ್ನೋ ನಿಮ್ಮ ವಾದದಲ್ಲಿ ನಿಜ ಇದೆ...

  ReplyDelete
 3. ಧನ್ಯವಾದಗಳು ಸಂತೋಷಅವರೆ. ನಿಮ್ಮ ಈ ಪ್ರೋತ್ಸಾಹ ಯಾವಾಗಲೂ ಇರಲಿ.

  ReplyDelete
 4. nija odakke maja anubavisidavarige gottu .baravanige shyli ista aaytu.
  barita iru good luck

  ReplyDelete
 5. ಶಾಂತಲ,
  ನಿಮ್ಮ ಕಥೆ ಓದುತ್ತಿದ್ದಂತೆ ಮೈ ಜುಮಂ ಎಂದಿತು,
  ಮುಂದೆ ಇಂಥಹ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ, ಜೀವ ಅಮೂಲ್ಯ,

  ReplyDelete
 6. hmmm . . .intresting, tipical appeli, majge polja :). . good writing.

  ReplyDelete
 7. Oh.. very interesting. ಕೊನೆಯಲ್ಲಿ ನಗು ಬತ್ತಾ ಇದ್ದು

  ReplyDelete