Thursday, June 11, 2009

ಕವ್-ಬಾಯ್ಸ್ ನಾಡಿನಲ್ಲಿ.....

ಕಾರ್ ನಿಲ್ಲಿಸಿ...ನಿಲ್ಲಿಸಿ...ಹಸುಗಳ ಫೋಟೊ ತೆಗಿತೀನಿ, ಎಂದು ಕೂಗಿದೆ. ಹಿಂದೆ ಮುಂದೆ ಯಾವ ವಾಹನಗಳು ಬರುತ್ತಿಲ್ಲವೆಂದು ಖಚಿತಪಡಿಸಿಕೊಂಡು, ಗಣಪತಿ ಪಕ್ಕದಲ್ಲಿ ಕಾರ್ ನಿಲ್ಲಿಸಿದ.


ನಿನ್ನೆಯಿಂದ ಹಸುಗಳು,ಹುಲ್ಲುಗಾವಲು ಕಂಡಾಗಲೆಲ್ಲ ಫೋಟೋ ತೆಗೆಯುವ ಪ್ರಯತ್ನ ನಡೆಸಿದ್ದೆ. ನೂರು ಕಿ.ಮೀ. ವೇಗದಲ್ಲಿ ಕೂತು ಫೋಟೋ ತೆಗೆಯುವ ಹೊತ್ತಿಗೆ ದನಗಾವಲು ಪಾಸಾಗಿ ಯಾವುದೊ ಗಿಡಮರಗಳ ಫೋಟೊ ಬರುತ್ತಿತ್ತಷ್ಟೇ.
ಆದರೆ ಈಗ ಯಾವುದೊ ಸಣ್ಣ ರಸ್ತೆಯಲ್ಲಿ ಹೊರಟಿದ್ದೆವು. ಪಕ್ಕದಲ್ಲೆಲ್ಲ ಸಣ್ಣ-ಸಣ್ಣ ಗುಡ್ಡಗಳು, ಎಲ್ಲಿ ನೋಡಿದರೂ ಹಸಿರ ರಾಶಿ, ಮೇಯುತ್ತಿರುವ ದನಗಳು. ಎಲ್ಲೋ ಒಂದೊಂದು ಮನೆ. ಇದು ಇಲ್ಲಿಯ ಹಳ್ಳಿಗಳು(ಫ಼ಾರಂ). ಕಾರ್ ನಿಲ್ಲಿಸಿ ಪಕ್ಕದಲ್ಲಿ ಮೇಯುತ್ತಿರುವ ಹಸುಗಳ, ಮೇಕೆಗಳ ಫೋಟೊ ಹೊಡೆದುಕೊಂಡೆ. ಪಕ್ಕದಲ್ಲೊಂದು ಸಿಮೆಂಟ್ ತಗಡಿನಿಂದಮಾಡಿದ ಸಾಧಾರಣ ಮನೆ. ಮನೆಯಿಂದ ಮಹಿಳೆಯೊಬ್ಬಳು ನಿಧಾನವಾಗಿ ಗೇಟಿನಬಳಿ ಬಂದಳು. ಜೊತೆಗೆ ಬಲಿಷ್ಠ ಎರಡು ನಾಯಿಗಳು, ಅವಳ ಅನುಮತಿ ಇಲ್ಲದೆ ಹಸುಗಳ ಫೋಟೊ ತೆಗೆದಿದ್ದರಿಂದ ಸಭ್ಯತೆಗಾಗಿ"ಹಾಯ್..ನಿಮ್ಮ ಹಸು-ಕುರಿಗಳ ಫೋಟೊ ತೆಗಿಲಾ" ಎಂದೆ. ಅವಳನ್ನೊಮ್ಮೆ ಮಾತನಾಡಿಸಬೇಕೆಂಬ ಆಸೆ ನನಗೂ ಇತ್ತು."ಧಾರಳವಾಗಿ" ಎಂದು ಗೇಟಿನ ಬಾಗಿನ್ನೂ ತೆರೆದಳು. ಬಲಿಷ್ಠ ನಾಯಿಗಳು ಹತ್ತಿರ ಬಂದೇ ಬಿಟ್ಟವು. ಎನಪ್ಪ ಕತೆ ಎಂದುಕೊಳ್ಳುವಷ್ಟರಲ್ಲೇ ಅವಳಷ್ಟೇ ಸ್ನೇಹಮಯಿ ಅವಳ ನಾಯಿಗಳು, ಬಾಲ ಆಡಿಸುತ್ತಾ ನನ್ನನ್ನೊಮ್ಮೆ ಸುತ್ತಿದವು.
ನಮ್ಮ ಹಳ್ಳಿಗರಂತೆ ಸರಳವಾಗಿ ಮಾತಿಗರಂಭಿಸಿದಳು. ಅವಳಿಗೂ ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ಬೇಸರವಿರಬೇಕು. ಅವಳೂ ಕೂಡ ಪ್ರತೀ ದಿನ ಅರವತ್ತು ಕಿ.ಮೀ ಡ್ರೈವ್ ಮಾಡಿಕೊಂಡು ಹೋಗಿ ಆಸ್ಟೀನಿನಲ್ಲಿ ಕೆಲಸ ಮಾಡುತ್ತಿದ್ದಳಂತೆ. ಈಗ ಸಾಕು ಎನಿಸಿದೆ. ಮೂರು ಮಕ್ಕಳು, ಪತಿಯೊಂದಿಗೆ ಆರಾಮವಾಗಿದ್ದೇನೆ ಎಂದಳು. ಆಡು, ದನ, ಕುದುರೆಗಳನ್ನು ಸಾಕಿಕೊಂಡಿದ್ದಾಳೆ. ದನ ಹಾಲು ಕೊಡುತ್ತದಾ ಎಂದಿದ್ದಕ್ಕೆ, ಎಲ್ಲವನ್ನೂ ಮಾಂಸಕ್ಕಾಗಿ ಸಾಕಿದ್ದು, ಬೇಕಿದ್ದರೆ ಆಡಿನ ಹಾಲು ಹಿಂಡಿಕೊಳ್ಳುತ್ತೇನೆ ಎಂದಳು. ಅಕ್ಕ-ಪಕ್ಕದವರಿಗೆಲ್ಲಾ ಹಲವಾರು ಎಕರೆ ಭೂಮಿಗಳಿವೆಯಂತೆ, ಆದರೆ ತನಗೆ ಮಾತ್ರ ಕೇವಲ ಹನ್ನೊಂದು ಎಕರೆ ಭೂಮಿ ಇದೆ. ಒಂದೊಂದು ಹಸುವಿಗೆ ಹತ್ತು ಎಕರೆ ಭೂಮಿ ಬೇಕು, ಆದರೆ ತನಗೆ ಜಾಗ ಸಾಲುತ್ತಿಲ್ಲ ಎಂದು ಅಳಲು ತೊಡಿಕೊಂಡಳು. ಹಸುಗಳಿಗೆ ಆಹಾರವೇನು ಎಂದಿದ್ದಕ್ಕೆ, ಅದೇನೊ ಹುಲ್ಲು ಕಟ್ ಮಾಡಿ ಮಿಕ್ಸಚರ್ ಮಾಡಿ ಕೊಡುತ್ತಾಳಂತೆ, ನಮ್ಮಲ್ಲಿಯ ಮುರಾದ ತರ ಎಂದುಕೊಂಡೆ.

ನಮ್ಮ ಹಳ್ಳಿಗಳಂತೆ ಹಸುಗಳಿಗಾಗಿ ಕೊಟ್ಟಿಗೆಯೆನೂ ಇರಲಿಲ್ಲ, ಬದಲು ದೊಡ್ಡ ಬಯಲಿನಲ್ಲಿ ಆರಾಮವಾಗಿ ಹಸುಗಳು ಮೇಯ್ದುಕೊಂಡು ಕೊಬ್ಬಿದ್ದವು. ಸುತ್ತಲೂ ಕರೆಂಟ್ ಬೇಲಿ. ಇದರಿಂದ ಹೊರಗೆ ಹೋಗದಿದ್ದರಾಯಿತಷ್ಟೇ.ಸಗೆಣಿ ಬಾಚುವಕೆಲಸವೂ ಇಲ್ಲ. ಹುಲ್ಲು ಕತ್ತರಿಸಲೂ ಯಂತ್ರ. ಅದನ್ನು ನೀಟಾಗಿ ರೋಲ್ ಮಾಡಲು ಫ್ಯಾನ್ ತರ ಕಾಣುವ ಇನ್ನೊಂದು ಯಂತ್ರ. ಹಸುಗಳನ್ನು ಕೊಂಡೊಯ್ಯಲೂ ಗಾಡಿ, ಇದನ್ನು ಕಾರಿನ ಹಿಂಬಾಗಕ್ಕೆ ಪಿಕ್ಸ್ ಮಾಡೊಕೊಂಡು ಹೋದರಯಿತು.ಟೆಕ್ಸಾಸ್ ರಾಜ್ಯ ಕವ್ ಬಾಯನ್ನರಿಗೆ(ದನಗಾಹಿಗಳು) ಪ್ರಸಿದ್ಧ, ಬುಷನ ಹುಟ್ಟೂರು, ಅವನೂ ಕೂಡ ಕವ್ ಬಾಯ್ ಆಗಿದ್ದ ಎಂದು ಕೇಳಲ್ಪಟ್ಟಿದ್ದೆ. ಆದರೆ ಹ್ಯೂಸ್ಟನ್ ನಗರದಲ್ಲೆಲ್ಲೂ ಕವ್-ಬಾಯನ್ನು ಕಂಡಿರಲಿಲ್ಲ. ಮೂರು ದಿನದ ರಜಕ್ಕಾಗಿ ಟೆಕ್ಸಾಸ್ ರಾಜಧಾನಿ ಆಸ್ಟೀನಿಗೆ ಬಂದಿದ್ದೆವು. ಇಲ್ಲಿನ ಹಸಿರು ಬೆಟ್ಟ-ಗುಡ್ಡಗಳನ್ನು ನೋಡಿ ಮಲೆನಾಡಿನಲ್ಲಿ ಹುಟ್ಟಿದ ನನಗೆ, ಕೇರಳದಲ್ಲಿ ಹುಟ್ಟಿದ ನಿಷಾಳಿಗೆ ನಮ್ಮೂರು ನೆನಪಾಗಿತ್ತು. ಇಲ್ಲಿನ ಹಸಿರು ಅದೇ ತರ. ತಡೆಯಲಾರದ ಬಿರು-ಬಿಸಿಲಿನಲ್ಲೂ ನಳನಳಿಸುವ ಹಸಿರು. ಹತ್ತು-ಹದಿನೈದು ದಿನಕ್ಕೊಮ್ಮೆ ಬರುವ ಮಳೆ ಪ್ರಕೃತಿಯನ್ನು ಹಸಿರಾಗಿರಿಸುತ್ತದೋ ಏನೋ. ಇಲ್ಲದಿದ್ದರೆ ಈ ಬಿಸಿಲಿನಲ್ಲಿ ಒಂದು ಪಾಪಸ್ ಕಳ್ಳಿ ಬೆಳೆಯುವದೂ ಕಷ್ಟವೆ.ಇಲ್ಲಿನ ಹಳ್ಳಿಗರಿಗೆ ಮಾಂಸವೇ ಮುಖ್ಯ ಆದಾಯ. ಒಂದು ಕೂತೂಹಲದ ಅಂಶವೆಂದರೆ ಒಂದೊಂದು ಫ಼ಾರ್ಮಗಳಲ್ಲಿ ಒಂದೇ ಬಣ್ಣದ ಹಸುಗಳು. ಕಂದು ಬಣ್ಣದ ಇಲ್ಲವೇ ಕಪ್ಪು ಬಣ್ಣದ ಹಸುಗಳು. ಒಂದು ಹಸು ತಪ್ಪಿಸಿಕೊಂಡು ಇನ್ನೊಂದು ಫ಼ಾರ್ಮಿಗೆ ಹೋದರೂ ಸುಲಭವಾಗಿ ಗುರುತಿಸಬಹುದು.

"ಹಳ್ಳಿಯಲ್ಲೇ ಹುಟ್ಟಿ, ಹಳ್ಳಿ ನೋಡಬೇಕೆಂದು ಆಸೆ ಪಟ್ಟಿದ್ದೆಯಲ್ಲಾ ಮುಗೀತಾ" ಗಣಪತಿ ಕೇಳಿದ.

"ಹಳ್ಳಿಯಲ್ಲಿ ಹುಟ್ಟಿದ್ದರಿಂದಲೇ ಹಳ್ಳಿನೋಡಬೆಕೆಂದು ಆಸೆ ಆಗಿದ್ದು. ಮುಗೀತು ನಡಿಯಿರಿ ಹೊರಡೋಣ" ಎಂದೆ.

1 comment:

  1. Good one but You have not written about cow boys...Do u know why the cowboys are well known ..?

    ReplyDelete