Thursday, April 23, 2009

ಸಂಬಂಧಿಗಳೇ ಇರದ ನಾಡಿನಲ್ಲಿ ಸಂಬಂಧಗಳನ್ನು ಹುಡುಕಿಕೊಂಡು.........


ಛಲಬಿಡದೇ ಬೇತಾಳದ ಬೆನ್ನಟ್ಟುವ ತ್ರಿವಿಕ್ರಮನಂತೆ ಮತ್ತೆ ಹೊರಟಿದ್ದೆ, ಇನ್ನೊಂದು ಮನೆಯ ಬಾಗಿಲು ತಟ್ಟಲು. ಇವರ್‍ಏನೆಂದುಕೊಳ್ಳುತ್ತಾರೋ ಎಂದು ಮನದಲ್ಲೊಂದು ಸಣ್ಣ ಅಳುಕು. ಇಲ್ಲಿಗೆ ಬಂದಮೇಲೆ ಹೀಗೆ ಎಷ್ಟೊಂದು ಮನೆ ಕದ ತಟ್ಟಿದ್ದೆನೋ ಸಂಬಂಧಗಳನ್ನು ಹುಡುಕಿಕೊಂಡು...ಕೆಲವು ಕಡೆ ಬಂದದಾರಿಗೆ ಸುಂಕವಿಲ್ಲವೆಂದು ಹಾಗೆ ವಾಪಸಾದರೆ,ಇನ್ನೂ ಹಲವಾರು ಕಡೆ "ನಮ್ಮ ಯಜಮಾನ್ರೂ ಹಾಗೆ ಕಣ್ರಿ....."ಎಂದು ಗಂಡಂದಿರನ್ನೂ ಅವರೆದುರಿಗೆ ಬೈದುಕೊಳ್ಳುವಷ್ಟು ಸಲುಗೆ ಬೆಳೆದಿತ್ತು.

ಎಲ್ಲ ಸಂಬಂಧಗಳನ್ನು ಸಾಗರದಾಚೆ ಬಿಟ್ಟುಬಂದ ನಮ್ಮಂತವರಿಗೆ ಇಂತಹ ಸಂಬಂಧಗಳು(ಸ್ನೇಹಗಳು) ಅನಿವಾರ್ಯ. ಅವರು ಏನಂದುಕೊಳುತ್ತಾರೋ ಹೇಗೆ ಮಾತನಾಡಿಸುತ್ತಾರೋ ಅಂತ ಯೋಚನೆ ಮಾಡುತ್ತಲೇ ಬಾಗಿಲು ತಟ್ಟೊದು....."ಹಾಯ್ ನನ್ನ ಹೆಸರು ಶಾಂತಲಾಂತ, ಮೊನ್ನೆ ಪಾರ್ಕಿನಲ್ಲಿ ಸಿಕ್ಕಿದ್ನಲ್ಲಾ ಅಂತಲೊ,ಅಪಾರ್ಟ್-ಮೆಂಟ್ ಎದುರುಗಡೆ ಸಿಕ್ಕಿದ್ನಲ್ಲಾ ಅಂತಲೊ ಮಾತು ಶುರು ಮಾಡಿಕೊಳ್ಳೊದು. ನಿಜವಾಗ್ಲೂ ಮಾತನಾಡಬೇಕು ಎನ್ನೊ ಮನಸ್ಸಿರುವವರಿಗೆ ವಿಷಯಗಳೇ ಬೇಕಾಗಿಲ್ಲ ಬಿಡಿ.....ಇವತ್ತಿನ ವೆದರ್ ಹ್ಯಾಂಗಿದೆ ಅಲ್ಲ....ಎಂದು ಶುರು ಮಾಡಿದವರಿಗೆ ಮನೆಗೆ ವಾಪಸ್ ಆಗುವ ಹೊತ್ತಿಗೆ ಎಷ್ಟೋ ವರ್ಷದಿಂದ ಪರಿಚಯಸ್ಥರೆನೋ ಎನ್ನುವಂತಾಗಿರುತ್ತೆ.

ಪಾರ್ಕಿನಲ್ಲೆಲ್ಲೋ...ಸಿಕ್ಕಿದಾಗ ಹಾಯ್ ಎಂದಾದಮೇಲೆ ಬರುವ ಎರಡನೇ ಮಾತು "ನಮ್ಮ ಮನೆ ನಂಬರ್ ಇದು, ಬನ್ನಿ ಒಂದುಸಲ..."ಎನ್ನೋದೆ. ಅವರೂ ಏನಾದ್ರೂ ತಿರುಗಿ ಇದೇ ಮಾತನ್ನು ಹೇಳಿಬಿಟ್ಟರೆ ಮುಗೀತು, ಮಹಾನ್ ಮರೆಗುಳಿ ಆದ ನನಗೆ ಅವರಮನೆ ಡೊರ್ ನಂಬರ್ ಮಾತ್ರ ತಲೆಯಲ್ಲಿ ಪಕ್ಕಾ ಅಚ್ಚಾಗಿರುತ್ತೆ.

"ಸಾಮಾನ್ಯವಾಗಿ ನೀವು ಯಾವಾಗ ಫ್ರೀ ಇರ್ತೀರಿ?" ಎಂದು ಕೇಳಿದ ಪ್ರಶ್ನೆಗೆ"ಮಧ್ಯಾನ್ನದ ಮೇಲೆ ಫ್ರೀನೇ.." ಅಂತೆನಾದ್ರೂ ಹೇಳಿಬಿಟ್ರೆ..ಓ ನನ್ನಂಥಾದ್ದೆ ಬಕರಾ ಸಿಕ್ಕದ ಎಂದು ತುಂಬ ಖುಷಿ ಆಗಿಬಿಡತ್ತೆ.

"ಬೆಳಿಗ್ಗೆ ಹತ್ತು ಗಂಟೆಮೇಲೆ" ಅಂತ ಅಂದ್ರೆ ಓ ಹನ್ನೆರಡು ಗಂಟೆಗೆ ಅಡಿಗೆ ಶುರು ಮಾಡ್ತಾರೆ, ಮಧ್ಯಾಹ್ನದಮೇಲೆ ಮಗು ಮಲಗಿಕೊಳ್ಳತ್ತೆ, ಮಗುಗೆ ಡಿಸ್ಟರ್ಬ್ ಮಾಡೊಲ್ಲ, ಅಂದ್ರೆ ಅವರ ಟೈಂಪಾಸ್ ಅವರೇ ಕಂಡುಕೊಂಡಿದ್ದಾರೆ ಎಂದರ್ಥ. ಇಲ್ಲಿಗೆ ಬಂದು ಎಷ್ಟು ವರ್ಷಾಯಿತು ಎಂದು ಕೇಳಿದಾಗ ಐದಾರು ವರ್ಷ ಅಂತ ಹೇಳಿದ್ರೆ ಅವರಿಗೆ ಈಗಾಗ್ಲೇ ತುಂಬಾ ಫ್ರೆಂಡ್ಸ ಇದಾರೆ, ಹೊಸ ಫ಼್ರೆಂಡ್ಸ್ ಹುಡುಕುವ ಅವಶ್ಯಕತೆ ಇಲ್ಲ ಎಂದು ಲೆಕ್ಕ. ತುಂಬಾ ವರ್ಷದಿಂದ ಇಲ್ಲೆ ಇರುವವರಿಗೆ ನಮ್ಮಂಗೆ ಒಂದೊ-ಎರಡೊ ವರ್ಷಕ್ಕೆಂದು ಬರುವವರನ್ನು ಕಟ್ಟ್ಕೊಂಡರೆ ಪ್ರಯೋಜನವಿಲ್ಲ. ಎನೋ ಗಟ್ಟಿ ಪರಿಚಯ ಆಯ್ತು ಎನ್ನೋ ಹೊತ್ತಿಗೆ ಗಂಟು-ಮೂಟೆ ಕಟ್ಟಿಕೊಂಡು ಹೊರಟಬಿಡ್ತಿವಿ. ಎಲ್ಲಕ್ಕಿಂತ ಅವರಿಗೂ ನಮ್ಮಂಗೆ ಮಾತನಾಡಬೇಕು ಎನ್ನುವ ಮನಸ್ಸು ಮುಖ್ಯ ಅಷ್ಟೇ.ಈ ಡೇ ಸೆವಿಂಗ್ ಶುರು ಆಗಿ ಬೇಸಿಗೆ ಬಂತು ಅಂದರೆ ಎಲ್ಲರಿಗೂ ಖುಷಿನೇ. ಮಾತಾಡಕೆ ಯಾರಾದ್ರೂ ಸಿಕ್ತರಾ ಅಂತ ಬಕ್ರಾಗಳನ್ನು ಹುಡುಕಿತ್ತಿರುವ ನನ್ನಂಥವರಿಗೆ ಇನ್ನೂ ಖುಷಿ. ಯಾವಾಗ್ಲೂ ನಾನೇ ಬೇರೆಯವರ ಮನೆ ಬಾಗಿಲು ಬಡಿಯೊದು ಅಂತ ಅಂದ್ಕೊಬೇಡಿ. ನಮ್ಮ ಮನೆ ಬಾಗಿಲನ್ನೂ ಇಬ್ಬರೊ-ಮೂವರೊ ಬಡಿದಿದ್ದಾರೆ ಸ್ವಾಮಿ....... ಒಂದಿನವಂತೂ ಇದ್ದಕ್ಕಿದ್ದಂತೆ ತಟಕ್ಕನೆ ರೋಡಿನಲ್ಲಿ ಒಬ್ಬ ಬಂದು, "ಹಲೋ..ನನ್ನ ಹೆಸರು ದೀಪಕ್ ಅಂತ ಇವಳು ನನ್ನ ಹೆಂಡತಿ ನಿಧಿ. ಯಾವಗ್ಲೂ ಮನೆಯಲ್ಲಿ ಒಬ್ಬನೇ ಬೇಜಾರು ಅಂತಾಳೆ, ಅದ್ಕೆ ಪರಿಚಯ ಬೆಳೆಸಿಕೊಳ್ಳೊಣ ಅಂತ ಬಂದೆ. ಒಂದಿನ ನಮ್ಮನೆಗೆ ಊಟಕ್ಕೆ ನೀವು ಬನ್ನಿ, ನಿಮ್ಮಮನೆಗೆ ನಾವು ಬರ್ತೀವಿ"ಎಂದು ಬಡಬಡನೆ ಬಡಾಯಿಸಿದಾಗ ಎನಪ್ಪಾ ಇದು ಎನಾದ್ರೂ ಮೋಸಮಾಡಕೆ ನೋಡ್ತಾ ಇದ್ದಾರಾ ಎಂದು ಹೆದರಿಬಿಟ್ಟೆ. ಇವನು ಯಾವುದೊ ಸೇಲ್ಸ್ ಬ್ರೊಕರೇ ಇರಬೇಕೆಂದು ಗಣಪತಿ ತೀರ್ಮಾನಿಸಿಬಿಟ್ಟಿದ್ದ. ಹಾಗೆ ಪರಿಚಯವಾದವಳನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ನಾನು ಮಾಡಿದೆ. ಹೀಗೆ ಹುಟ್ಟಿಕೊಂಡ ನಮ್ಮ ಸಂಘ ಬೆಳೆದು ಎಂಟೊ-ಹತ್ತೊ ಜನರ ಗುಂಪಾಗಿ ಸಾಕು, ಇನ್ನೂ ಜನ ಜಾಸ್ತಿ ಆದರೆ ಮೆಂಟೆನ್ ಮಾಡಿಕೊಂಡು ಹೋಗೊದು ಕಷ್ಟ ಎಂಬ ಸ್ಥಿತಿಗೆ ಬಂದಾಗ ಕಂಡಕಂಡವರೊಡನೆ(ಭಾರತೀಯರು ಮಾತ್ರ) ಹಲ್ಲುಕಿಸಿಯುವ ಕೆಲಸವನ್ನೂ ನಾನು ಬಿಟ್ಟೆ.
ಕಥೆ ಇಲ್ಲಿಗೆ ಮುಗಿದಿದ್ದರೆ ಚೆನ್ನಾಗಿರುತಿತ್ತು. ಹಾಗೆ ಒಟ್ಟಾದ ನಮ್ಮ ಗುಂಪು ಹಾಗೆ ಚದುರತೊಡಗಿತ್ತು."ನಿವೆಲ್ಲ ಒಂದೊ ಎರಡೊ ವರ್ಷಕ್ಕೆ ವಾಪಸ್ ಹೋಗಿ ಬಿಡ್ತಿರಾ, ಆಗ ನಂಗೆ ಮತ್ತೆ ಬೇಜಾರು ಎಂದು ಹೇಳುತಿದ್ದ ನಿಧಿ ಅಮ್ಮನ ಸಾವಿನಿಂದಾಗಿ ಅವಳೇ ಮೊದಲು ವಾಪಸ್ ಹೋದಳು. ಅಪ್ಪನ ಡಿಪ್ರೆಶನಿಂದಾಗಿ ಒಬ್ಬಳೇ ಮಗಳಾಗಿದ್ದ ಅವಳು ಇನ್ನೆಂದೂ ವಾಪಸ್ ಬರದಾದಳು. ಆರ್ಥಿಕ ಹಿಂಜರಿತದಿಂದಾಗಿ ಅವಳ ಗಂಡನೂ ತಿಂಗಳೊಳಗೆ ವಾಪಸ್ ಹೋದ. ಇನ್-ಫ಼ೋಸಿಸ್ ಕೆಲವು ಬ್ರಾಂಚ್ ಸ್ಟಾಫ಼ರ್ಡ್ ದಿಂದ ಹ್ಯೂಸ್ಟನಿಗೆ ಬದಲಾಯಿಸಿದ್ದರಿಂದ ಇನ್-ಫ಼ೋಸಿಸ್ ಉದ್ಯೋಗಿ ಪತ್ನಿಗಳಾದ ನಾವೂ ಕೆಲವರು ಅಲ್ಲಿಂದ ಹೊರಟೆವು. ಎಲ್ಲರೂ ಬೆರೆ-ಬೆರೆ ಅಪಾರ್ಟ್-ಮೆಂಟಿನಲ್ಲಿ ಮನೆ ಹುಡುಕುವುದು ಅನಿವಾರ್ಯವಾಯಿತು. ದಿನವೂ ಬೇಟಿ ಮಾಡುತಿದ್ದ ನಮಗೆ ಫೋನಿನಲ್ಲೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಎಕಾ-ಎಕಿ ಹೊಸ ಅಪಾರ್ಟ್-ಮೆಂಟಿಗೆ ಬರುವಾಗ ನನಗೆ ಇಲ್ಲಿ ಭಾರತೀಯರು ಇದ್ದಾರೊ ಇಲ್ವೋ ಅನ್ನೊದೇ ಅನುಮಾನವಾಗಿತ್ತು. ಅಪಾರ್ಟ್-ಮೆಂಟ್ ಅಡಿಯಿಡುತ್ತಿದ್ದಂತೆ ಯಾರೋ ಚೂಡಿದಾರ್ ಕಸ ಎಸಿಯೊಕೆ ಬಂದಿದ್ದನ್ನು ನೋಡಿ ಹಿರಿಹಿರಿ ಹಿಗ್ಗಿಬಿಟ್ಟೆ. ಆಮೇಲೆ ನೋಡಿದ್ರೆ ಈ ಅಪಾರ್ಟ್-ಮೆಂಟ್ ತುಂಬಾ ಭಾರತೀಯರೆ, ಆದ್ರೆ ಯಾರೂ ಮಾತಾಡೊಲ್ಲ ಅಷ್ಟೇ. ಹೊಸ ಮನೆಗೆ ಸಾಮಾನು ಸಾಗಿಸುತಿದ್ದಾಗಲೇ ಪಕ್ಕದಮನೆ ಹೊರಗಡೆಯಿರುವ ಚಪ್ಪಲಿ ನೋಡಿ "ಇದು ಇಂಡಿಯನ್ಸೆ ನೋಡು" ಎಂದು ಗಣಪತಿ ಚಾಲೆಂಜ್ ಕಟ್ಟಿದ್ದ. ಎಷ್ಟು ಹೊತ್ತಿಗೆ ಹೊರಗೆ ಬರ್ತಾರೆ ನೋಡಬೇಕು ಎಂದು ಕಾದು...ಕಾದು ಒಂದು ವಾರದಮೇಲೆ ಸಿಕ್ಕಿದ್ದರು. ಬರಿ ಇಂಡಿಯನ್ಸ್ ಮಾತ್ರ ಅಲ್ಲ, ಕನ್ನಡದೊರು. ನನಗೆ ಆಕಾಶ ಮೂರೇ ಗೇಣು. ಆಮೇಲೆ ನೋಡಿದ್ರೆ ಅಮೇರಿಕನ್ಸ್ ಅದ್ರೂ ಮಾತನಾಡಿಸಬಹುದು, ಇವರನ್ನು ಮಾತಾಡಿಸಕ್ಕಾಗಲ್ಲ, ಅಷ್ಟು ಬ್ಯುಸಿ....


ಹಂಗೆ ನೋಡಕೆಹೋದ್ರೆ ಎಲ್ಲರಿಗೂ ಈ ಬಾಗಿಲು ಬಡಿಯೋ ಅವಶ್ಯಕತೆ ಎನಿರಲ್ಲ. ಮಕ್ಕಳ ಕಾರಣದಿಂದ ಮನೆಯಲ್ಲಿರೋ ನಮ್ಮಂತವರಿಗೆ ಎಚ್ ಫ಼ೊರ್ ವೀಸಾದಲ್ಲಿ ಬಂದ ವರ್ಕ್ ಪರ್ಮಿಟ್ ಇಲ್ಲದೆ ಹೋದವರಿಗೆ, ಅಕ್ಕ,ಅಣ್ಣ, ತಂಗಿ, ಚಿಕ್ಕಮ್ಮ ಹೀಗೆ ಯಾವ ಸಂಬಂಧಿಕರು ಈ ದೇಶದಲ್ಲಿ ಇಲ್ಲದೆಹೊದವರಿಗೆ, ಕಾರ್ ಡ್ರೈವಿಂಗ್ ಗೊತ್ತಿಲ್ಲದವರಿಗೆ ಇಂಥವರಿಗೆಲ್ಲ ಬೇಜಾರೆ ಇಲ್ಲಿ.....


ನಿಮ್ಮ ಭರತನಳ್ಳಿ ಸೀಮೆ ಹಿಂಗೆ, ನಿಂಗಳ ಕರೂರಸೀಮೆ ಹಾಂಗೆ ಎಂದು ಸೀಮೆಯಲ್ಲೂ ಪರಕೀಯತೆ ಕಾಣುತಿದ್ದ ನಮಗೆ, ಕಾವೇರಿ ವಿವಾದದ ತಮಿಳರು, ಗಡಿವಿವಾದದ ಮಹಾರಾಷ್ಟ್ರಿಗಳು ಎಲ್ಲರೂ ಆತ್ಮೀಯರೇ. ಇಲ್ಲಿ ಅವುಗಳ ಬಗ್ಗೆ ಯಾರೂ ಮಾತಾಡಲ್ಲ. ನಾವೆಲ್ಲ ಭಾರತೀಯರು ಇಷ್ಟೇ ಮಾತು.


ಹಾಂ! ನಾನು ಕದ ತಟ್ಟೊಕೆ ಹೊರಟಿದ್ದೀನಿ ಎಂದು ಆರಂಭದಲ್ಲಿ ಹೇಳಿದ್ನಲ್ಲಾ.. ಅವರ ಕಥೆ ಹೇಳ್ತಿನಿ ಕೇಳಿ....... ಕದ ತಟ್ಟಿದ ತಕ್ಷಣ ಅವರು ಬಾಗಿಲೆನೊ ತೆಗೆದು ಒಳ ಕರೆದರು. ಒಳಗಡೆ ನೋಡಿದರೆ ತೂಗುಯ್ಯಾಲೆ, ಸೊಫಾ, ಟಿ.ವಿ-ಡಿಶ್, ಮನೆ ತುಂಬಾ ಜಾಗನೇ ಇಲ್ಲದಷ್ಟು ಆಟಿಕೆ ಸಾಮನು, ಕಬೊಡ್ ತುಂಬ ಪುಸ್ತಕಗಳ ರಾಶಿ ಇವನ್ನೆಲ್ಲಾ ನೋಡಿ ಓಹೋ! ಇವರು ಒಂದು-ಎರಡು ವರ್ಷಕ್ಕೆಂದು ಇಲ್ಲಿಗೆ ಬಂದವರಲ್ಲಾ, ನನ್ನ ಡೈರಕ್ಷನ್ ಎಲ್ಲೊ ತಪ್ಪಿ ಹೋಯ್ತು ಎಂದುಕೊಂಡೆ. ಆದ್ರೆ ಹಾಗೆನೂ ಆಗಲಿಲ್ಲ. ನನಗಿಂತ ಅವರೆ ಜಾಸ್ತಿ ಮತ್ತೆ ಬನ್ನಿ-ಬರ್ತಾ ಇರಿ, ಕೀಪ್ ಇನ್ ಟಚ್ ಅಂದ್ರು. ಇಲ್ಲಿಗೆ ಬಂದು ಎಂಟು ವರ್ಷ ಆದ್ರೂ ಯಾರೂ ಫ್ರೆಂಡ್ಸ ಇಲ್ಲವಂತೆ, ಕಾರ್ ಡ್ರೈವಿಂಗ್ ಬರಲ್ಲಂತೆ.. ಕೆಲಸ ಮಾಡೊದಕ್ಕೆ ಪರ್ಮಿಟೇ ಇಲ್ಲ...ಹೊರಗಡೆ ವಾಕಿಂಗ್ ಮಾಡಿದ್ದನ್ನ ಕಂಡೆ ಇಲ್ಲ...ಇವರಿಗೆ ನಮ್ಮ ತರ ಚಳಿಗಾಲ ಎನ್ನೋ...ನಾಲ್ಕು ತಿಂಗಳು ಜೈಲು ಶಿಕ್ಷೆ ಮಾತ್ರವಲ್ಲ...ಬಹುಷಃ ಜೀವಾವಧಿ ಶಿಕ್ಷೆಯೆ ಇರಬೇಕು. ಅಥವಾ ಕದ ತಟ್ಟೊ ಕಲೆ ಗೊತ್ತಿಲ್ಲ ಅನ್ನಿಸುತ್ತೆ......ಪಾಪ!

3 comments:

 1. ದಪ್ಪ ಆಗ್ತಾ ಇದ್ದದ್ದ್ದು ಎಂತಕ್ಕೆ ಹೇಳಿ ಗೊತ್ತಾತು!

  ReplyDelete
 2. Hi shantakka This is super one...entrtianing writing style...lets rock shantakka..

  ReplyDelete
 3. ಲೇಖನ ಚೆನ್ನಾಗಿದೆ

  http://nudichaitra.blogspot.com

  ReplyDelete