Sunday, April 12, 2009

ವಿಲಿಯಂ ಟವರ್ಸ್

ಆ ಒಂದು ಕ್ಷಣ ನನ್ನನ್ನು ಮಂತ್ರಮುಗ್ದನನ್ನಾಗಿಸಿ ಬಿಟ್ಟಿತ್ತು. ಏಷ್ಟೋ ದೂರದವರೆಗೆ ಕಾಣುವ ರಸ್ತೆಗಳು, ಬೆಂಕಿಪೊಟ್ಟಣ ಚಲಿಸಿದಂತೆ ಕಾಣುವ ಕಾರುಗಳು, ಲೈನ್ ಹೊಡೆದಿಟ್ಟಂತೆ ನೇರವಾಗಿ ಕಾಣುವ ಸ್ಟ್ರೀಟುಗಳು. ನಮ್ಮಲ್ಲಿ ವ್ಯತ್ಯಾಸ ಕಂಡುಹಿಡಿಯಿರಿ ಎಂದು ಅಣುಕಿಸಿವಂತಿದ್ದ ಒಂದೇ ತರದ ಮನೆಗಳು, ನಿನ್ನೆದುರಿಗೆ ನಾನ್ ಕುಬ್ಜ ಕಣೊ ಎಂದು ತಲೆ ತಗ್ಗಿಸಿ ನಿಂತಂತಿದ್ದ ಅರವತ್ನಾಲ್ಕು ಫೂಟ್ ಎತ್ತರದ ಮಾನವ ನಿರ್ಮಿತ ಜಲಪಾತ, ಇಲ್ಲಿರುವುದು ಒಂದೇ ಬಣ್ಣ ಎಂದು ಹೇಳುವಂತಿದ್ದ ಹಸಿರ ರಾಶಿ..... ಇದನ್ನೆಲ್ಲಾ ನೋಡುತ್ತಿದ್ದಂತೆ ಆಹಾ ಜೀವವೇ...ಧನ್ಯೋಸ್ಮಿ...ಎಂದು ಮನಸ್ಸು ಹೇಳಿಬಿಟ್ಟಿತ್ತು. ಗಂಡನಮೇಲೆ ಎಲ್ಲಿಲ್ಲದ ಹೆಮ್ಮೆ ಮೂಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಾನವಾ ನೀನು ಇಷ್ಟು ಗ್ರೇಟಾ...? ಎಂದು ಮನಸ್ಸು ಪ್ರಶ್ನೆ ಕೇಳುತಿತ್ತು. ಯಾಕೆಂದ್ರೆ ನಾನು ವಿಲಿಯಮ್ ಟವರ್ಸ್..ನ ಮೂವತ್ತನೇ ಅಂತಸ್ತಿನಲ್ಲಿ ನಿಂತು ನೋಡುತ್ತಿದ್ದೆ.








ಹ್ಯೂಸ್ಟನ್ನಿನ ವ್ಯೂ ನೋಡೊದಾದ್ರೆ ನಮ್ಮ ಆಫ಼ೀಸಿನಿಂದ ನೋಡಬೇಕು, ಒಂದಿನ ಕರೆದುಕೊಂಡು ಹೋಗ್ತೇನೆ ಎಂದು ಗಣಪತಿ ಹೇಳುತ್ತಲೇ ಇದ್ದ. ಅದೊಂದು ಭಾನುವಾರವೂ ಕೆಲಸ ಮಾಡುವ ಅರ್ಜೆಂಟ್ ಇತ್ತು. ವೀಕೆಂಡಿನಲ್ಲೂ ಆಫ಼ೀಸಾ...? ಎನ್ನುವ ಹೆಂಡತಿ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಅವನಿಗೂ ಒಂದು ಉಪಾಯ ಬೇಕಿತ್ತು, .
"ಸರಿ ಆಫ಼ೀಸನ್ನು ತೋರಿಸ್ತಿನಿ ಬನ್ನಿ" ಎಂದು ಕರೆದ. ವೀಕೆಂಡಿನಲ್ಲೂ ಒಬ್ಬಳೇ ಇರಬೇಕಾ ಎಂದು ಯೋಚನೆ ಮಾಡ್ತಾ ಇದ್ದ ನನಗೂ ಅದೇ ಸರಿ ಎನಿಸಿತು.

ವಿಮಾನಿನಿಂದ ಕೆಳಗಡೆ ನೋಡುವದಕ್ಕಿಂತಲೂ ಮಜವಿತ್ತು ಇಲ್ಲಿ.ಮೂವತ್ತನೇ ಅಂತಸ್ತಿನಲ್ಲಿ ನಿಂತೂ ಕಟ್ಟಡ ಬುಡ ನೋಡಬಹುದಾಗಿತ್ತು. ನಿಂತು ನೋಡುವವರಿಗೆ ಭಯ..ತಲೆಸುತ್ತು ಬಂದಂತಾಗುತ್ತದೆ

ಕತ್ತಲಾಗಿತ್ತಿದ್ದಂತೆ ಎಷ್ಟೋ ದೂರದವರೆಗೆ ಕಾಣಿಸುವ(ಜಾತ್ರೆಯಲ್ಲಿ ಸರ್ಕಸ್ ಕಂಪನಿಯವರು ಲೈಟ್ ಬಿಡುತ್ತಾರಲ್ಲ ಆತರ) ಟಾರ್ಚ್ ಲೈಟ್ ಒಂದು ಎಲ್ಲ ಕಡೆ ತಿರುಗುತ್ತ ನಾನು ಇಲ್ಲಿದ್ದಿನಿ ಎಂದು ತೋರಿಸುತ್ತಲೇ ಇರುತ್ತದೆ.
ಈ ವಿಲಿಯಮ್ ಟವರ್ಸ್ ಅರವತ್ತು ಅಂತಸ್ಸಿನ ಕಟ್ಟಡ. ಎಲ್ಲ ಲಿಫ಼್ಟ್ ಎಲ್ಲ ಮಹಡಿಗಳಿಗೂ ಹೋಗುವುದಿಲ್ಲ.ನಂಬರ್ ನೋಡಿಯೇ ಲಿಫ಼್ಟ್ ಹತ್ತಬೇಕು.

"ಒಂದಿನ ಮೂವತ್ತು ಮಹಡಿಗಳನ್ನೂ ಮೇಟ್ಟಿಲೇರಿ ಹತ್ತಬೇಕು ಏನಾಗತ್ತೆ?" ಎಂದೆ. "ಅಲ್ಲೆಲ್ಲ ಬೇರೆ ಬೇರೆ ಆಫ಼ೀಸುಗಳು ಇರುತ್ತೆ ಹಾಗೆಲ್ಲ ಬಿಡಲ್ಲ" ತನ್ನ ಗುರುತಿನ ಕಾರ್ಡನ್ನು ಲೇಸರ್ ಕೆಳಗಡೆ ಉಜ್ಜಿ ಆಫ಼ೀಸಿನ ಬಾಗಿಲು ತೆಗೆಯುವ ಗಡಿಬಿಡಿಯಲ್ಲಿ ಹೇಳಿದ.

"ಐಯ್ಯಪ್ಪಾ ಇಲ್ಲಿಂದನೇ ಹೆಂಗೆ ಕಾಣಿಸ್ತಾ ಇದೆ ಇನ್ನೂ ಅರವತ್ತನೇ ಮಹಡಿಯಿಂದ ನೋಡಿದ್ರೆ ಹೆಂಗೆ ಕಾಣುತ್ತೋ ಎನೋ"ಅಂದಿದ್ದಕ್ಕೆ "ಅಲ್ಲೆಲ್ಲ ನಮಗೆ ಬಿಡಲ್ಲ ನಮ್ಮ ಕಾರ್ಡ ಕೇವಲ ಮೂವತ್ತನೇ ಮಹಡಿಗೆ ಮಾತ್ರ" ಗಣಪತಿ ಹೇಳಿದ.

ಇವರಂತೆ ಇನ್ನೂ ಕೆಲವರು ವೀಕೆಂಡನಲ್ಲಿ ಕೆಲಸ ಮಾಡಲು ಆಫ಼ೀಸಿಗೆ ಹಾಜರಾದರು. ಅಲ್ಲೇ ಇರಲು ಮುಜುಗರವಾಗಿ ಸರಿ ಕೆಳಗಡೆ ಇರ್ತೀವಿ ಕೆಲಸ ಮುಗಿದಮೇಲೆ ಬನ್ನಿ ಎಂದು ಫ಼ಾಲ್ಸಿನ ಎದುರುಗಡೆ ಇರುವ ಹಸಿರು ಹುಲ್ಲಿನಮೇಲೆ ಅಡ್ಡಾಡಿದೆವು.




ಅರೇ! ಏನು ಮಜಾ ಹುಲ್ಲಿನಮೇಲೆ ಮಲಗಿಕೊಂಡು ವಿಲಿಯಂ ಟವರ್ಸ್ ತುದಿನೇ ನೋಡ್ತಾ ಇದ್ರೆ ನಮ್ಮ ಕಣ್ಣೇ ನಮಗೆ ಮೋಸ ಮಾಡಿಬಿಡುತ್ತೆ. ಮೋಡಗಳು ಹಾದು ಹೋಗುವ ಬದಲು ಟವರೇ ಒಂದುಕಡೆ ವಾಲುತ್ತೆದೆ ಇನ್ನೇನು ಬಿದ್ದೇ ಹೋಗುತ್ತೆ ಎನಿಸುತ್ತದೆ.
"ಸಿಂಧೂರ್ ಇಲ್ಲಿ ಬಾ ಮಜ ತೋರಿಸ್ತಿನಿ. ಇಲ್ಲಿ ಮಲಗಿಕೊಂಡು ತುದಿನೇ ನೋಡು" ಎಂದಿದ್ದಕ್ಕೆ
"ಅಮ್ಮಾ ಅದು ಬೀಳ್ತಾ ಇದೆ ನಡಿ ಹೋಗೊಣ" ಎಂದು ಅವಸರಾವಸರವಾಗಿ ಎದ್ದ.
"ಇಲ್ಲ ಸಿಂಧೂರ್ ಮೋಡ ದಾಟಿ ಹೋಗ್ತಾ ಇರೋದು ಹಾಗೆ ಕಾಣಿಸುತ್ತೆ "ಎಂದೆ.
"ಅಮ್ಮಾ ಈ ವಿಲಿಯಂ ಟವರ್ಸ್ ಬಿದ್ದು ಹೋಗಲಿ"
"ಯಾಕೋ ಅದ್ರಲ್ಲಿ ನಿನ್ನ ಅಪ್ಪಾ ಇದ್ದಾರಲ್ಲೋ"
"ಅಪ್ಪಾ ಮನೆಗೆ ಬಂದಮೇಲೆ ಬಿದ್ದು ಹೋಗಲಿ""ಸರಿ ಬಾ ಹಿಂದಿನ ಜನ್ಮದಲ್ಲೆಲ್ಲೋ ಬಿನ್ ಲಾಡೆನ್ ಸಂಭಂದಿಕ ಆಗಿದ್ದೆ ಅನ್ನಿಸತ್ತೆ, ಫ಼ಾಲ್ಸ್ ತೋರಿಸ್ತಿನಿ ಬಾ ಎಂದು ಆಕಡೆ ಹೊರಟೆ.


2 comments:

  1. ಸಖತ್ ಆಗಿದ್ದು. ಇದು ನೋಡು ಬರೆಯ ಸ್ಠೈಲು ಅಂದ್ರೆ.

    ReplyDelete
  2. Shanatakka this blog matter really deserves good comments. smoothly written..and makes us read comfertably. with proper photos..and this is typical kind blogs I really like...

    way to go..shantakka..way to go

    ReplyDelete