Tuesday, March 24, 2009

ಅಲೆಗಳ ಆಚೆ...



ಕಾಣದ ಕಡಲಿಗೆ ಕೈ ಚಾಚಿದೇ ಮನ. ಕಾಣಬಹುದೇ ಒ೦ದು ದಿನ.....ನೋಡಬಹುದೇ...ಒ೦ದು ದಿನ.....ಸಿಅಶ್ವಥ್ ಅವರ ಈ ಹಾಡು ನಾನು ಇಷ್ಟ ಪಡುವ ಹಾಡುಗಳಲ್ಲಿ ಒಂದು.ಬೆಂಗಳೂರಿನಲ್ಲಿ ಇರುವಾಗ ವಿಮಾನು ನೋಡಿದಾಗೆಲ್ಲಾ ಈ ಹಾಡು ನೆನಪಾಗೋದು. ವಿಮಾನು ಹತ್ತಬೇಕು, ಅಮೇರಿಕಾ ನೋಡಬೇಕು ಎನ್ನೋದು ನನ್ನ ಬಹುದಿನದ ಆಸೆಗಳಲ್ಲಿ ಒಂದು."ಅಮೇರಿಕಾ" ಅನ್ನೋ ಹೆಸರಿನಲ್ಲೆ ಅಂಥಾ ಮಾಯೆ ಇದೆ.ನಾಲ್ಕನೇ ವರ್ಷದ ಮದುವೆ ವಾರ್ಷಿಕೋತ್ಸವದಂದು ವಿಮಾನ ಹತ್ತಿದ್ದೆ ಮತ್ತು ವೀಸಾ ಆಫೀಸಿನಲ್ಲಿದ್ದೆ.


ಎಪ್ರಿಲ್ ೧೯-೨೦೦೮ರಂದು ಆತ್ಮೀಯರ ವಿದಾಯದೊಂದಿಗೆ "ಅಮೇರಿಕಾ"ಕ್ಕೆ ಹೊರಟಿದ್ದೆ.ಹೊಸ ಜಗತ್ತನ್ನು ನೋಡ್ತಿನಿ ಎನ್ನೊ ಕುಶಿ ಒಂದುಕಡೆಯಾದ್ರೆ ನಮ್ಮವರನ್ನಲ್ಲಾ ಬಿಟ್ಟಿರಬೇಕಲ್ಲಾ ಎನ್ನೋ ಬೇಜಾರು ಒಂದು ಕಡೆ. ನಾವು ಬೆಂಗಳೂರಿನಿಂದ ಡೆಲ್ಲಿ,ಡೆಲ್ಲಿಯಿಂದ ನ್ಯೂಯಾರ್ಕ್, ನ್ಯೂಯಾರ್ಕ್ನಿಂದ ಹ್ಯೂಸ್ಟನ್ ಹೀಗೆ ಮೂರು ವಿಮಾನವನ್ನು ಹತ್ತಿಳಿಯಬೇಕಿತ್ತು. ರಾತ್ರಿ ೧೦ಗಂಟೆಗೆ ಡೆಲ್ಲಿಯಿಂದ ನ್ಯೂಯಾರ್ಕಗೆ ವಿಮಾನು ಹೊರಡುವದಿತ್ತು.ಡೆಲ್ಲಿಯಲ್ಲಿ ಕನಿಷ್ಟ ಮೂರು ತಾಸು ಮೊದಲಾದರು ಇರಬೇಕೆಂದು ಎಲ್ಲರು ಹೇಳಿದ್ದರು.ಆದರೆ ಬೆಂಗಳೂರಿನಿಂದ ನಾಲ್ಕು ಗಂಟೆಗೆ ಹೊರಡಬೇಕಿದ್ದ ವಿಮಾನು ೫.೪೦ಕ್ಕೆ ಹೊರಟಿತ್ತು.ಡೆಲ್ಲಿಗೆ ಕನಿಷ್ಟ ಮೂರು ತಾಸಾದರು ಬೇಕು.ನಮ್ಮ ಎಲ್ಲ ಲಗ್ಗೆಜ್ ಬ್ಯಾಗು ಮತ್ತು ಕ್ಯಾಬಿನ್ ಬ್ಯಾಗುಗಳು ಪಾಸಾಗಿ ಬಂದಿತ್ತು.ಉಪ್ಪಿನಕಾಯಿ ತುಪ್ಪ ಬೆಲ್ಲ ಇಂಥವನ್ನು ಚೆಕ್ ಮಾಡುವ ಸಮಯದಲ್ಲಿ ತೆಗೆದುಹಾಕಿ ಬಿಡ್ತಾರೆ ಎಂದು ಎಲ್ಲರು ಹೇಳಿದ್ದರು.ಆದರೆ ಡೊಮೆಸ್ಟಿಕ್ ನಿಲ್ದಾಣದಲ್ಲಿ ಇದು ಪಾಸಾಗಿತ್ತು. ಬೆಂಗಳೂರಿನಿಂದ ಡೆಲ್ಲಿಗೆ ಹೋಗುವ ವಿಮಾನ ಹತ್ತಿದ್ದೆವು. ಎಷ್ಟೊತ್ತಿಗೆ ಡೆಲ್ಲಿ ಸೇರ್ತಿವಿ ಅನ್ನೊ ಟೆನ್-ಷನ್ ಇಬ್ಬರಿಗೂ ಶುರು ಆಗಿತ್ತು.ಸರಿ, ಇಲ್ಲೆ ಒಂದಸಾರಿ ಟಾಯ್ಲೆಟ್-ಗೆ ಹೋಗಿಬರೊಣ ಅಂತ ಎದ್ದು ನಿಂತೆ.ವಿಮಾನಿನ ಇನ್ನೊಂದು ಪಕ್ಕದಲ್ಲಿ ಆಗಲೆ ಒಬ್ಬ ಮಹಿಳೆ ಎದ್ದು ನಿಂತಿದ್ದಳು."ಅಲ್ಲೆ ಕೂರು" ಎಂದು ಆರ್ಡರ್ ಮಾಡುವ ತರ ಸನ್ನೆ ಮಾಡಿದಳು. ಹೋ! ಇಬ್ಬರು ಜೊತೆಗೆ ಎದ್ದರೆ ವಿಮಾನು ಬ್ಲಾಲೆನ್ಸ್ ತಪ್ಪಿಹೊಗತ್ತೊ ಎನೊ ಅಂತ ಭಯ ಆಗಿ ಧಡ್ ಎಂದು ಕೂತೆ."ನಾನು ಮೂದಲು ಎದ್ದಿದ್ದೀನಿ,ನಾನೆ ಮೊದಲು ಹೋಗ್ತಿನಿ ಅಂತ ಅವಳು ಕೈಸನ್ನೆ ಮಾಡಿದ್ದಳು ಅಂತ ಆಮೇಲೆ ಗೊತ್ತಾಗಿ ನಗು ಬಂತು.ನಾವು ಊಹಿಸಿದಂತೆ ವಿಮಾನು ೮.೩೦ಕ್ಕೆ ಡೆಲ್ಲಿ ಸೇರಿತ್ತು.ಅಲ್ಲಿ ಡೊಮೆಸ್ಟಿಕ್ ನಿಲ್ದಾಣದಿಂದ ಇಂಟರ್-ನ್ಯಾಷನಲ್ ಎರ್-ಪೊರ್ಟ್ ಗೆ ಹೋಗಲು ೩೦ನಿಮಿಷವಾದರು ಬೇಕು.ಯಾವುದೊ ಕ್ಯಾಬ್ ಹಿಡಿದು ಅಲ್ಲಿಗೆ ಹೋಗುವವರೆಗೆ ೯ಗಂಟೆ ಆಗಿತ್ತು.ಇನ್ನಿರುವುದು ಒಂದೆ ತಾಸು,ವಿಪರೀತ ಟೆನ್ಷನ್ ಜೊತೆಗೆ ಅಪರಿಚಿತ ವಾತಾವರಣ. ನಮ್ಮ ಲಗ್ಗೆಜ್ ಗಳನ್ನು ಸ್ಕಾನರ್ ಕೆಳಗಡೆ ಇಟ್ಟೆ."ಅಯ್ಯೊ ಉಪ್ಪಿನಕಾಯಿ ತೆಗಿರಿ ಅಂತ ಅಂದರೆ ೧೦ ನಿಮಿಷನಾದ್ರು ಬೇಕು. ತರಲೆಬಾರದಾಗಿತ್ತು." ಎಂದುಕೊಂಡೆ.ಆದ್ರೆ ಹಾಗೆನೂ ಆಗಲಿಲ್ಲ.ನಮ್ಮ ಎಲ್ಲ ಬ್ಯಾಗುಗಳು ಪಾಸಾದವು.ಲಗ್ಗೆಜ್ ಬ್ಯಾಗುಗಳನ್ನು ಇಲ್ಲೆ ಬಿಟ್ಟಿದ್ದರಿಂದ ೬೦ಕೆಜಿ ಭಾರ ಕಡಿಮೆ ಆಯಿತು.ಸಿಂಧೂರ್ ಮತ್ತು೧೦ಕೆಜಿ ಕ್ಯಾಬಿನ್ ಬ್ಯಾಗ್ ಹಿಡಿದು ಮುಂದೆ ಓಡಿದೆ.ಅಲ್ಲಿ ಒಬ್ಬಬ್ಬರಿಗೆ ಒಂದೊಂದರಂತೆ ಮೂರು ಫಾರಂ ತುಂಬುವ ಹೊತ್ತಿಗೆ ಮತ್ತೆ ೧೫ ನಿಮಿಷ.ಅಲ್ಲಿಗೆ ಸಮಯ ೯.೩೦.ಇನ್ನೂ ಟೆನ್-ಷನ್ ಫಾರಂ ವಾಪಸ್ ಕೊಡುವಲ್ಲಿ ೫-೬ಜನರ ಕ್ಯೂ ಇತ್ತು.ಅವರದ್ದೆಲ್ಲ ಮುಗಿದು ನಮ್ಮ ಸರದಿ ಬಂತು.ಸಿಂಧೂರನ ವೀಸಾ ಫೋಟೊದಲ್ಲಿ ಅವನಿಗೆ ಎರಡು ಜುಟ್ಟು ಮತ್ತು ಕಿವಿಗೆ ರಿಂಗ್ ಇತ್ತು. ಆದರೆ ಈಗ ಅವೆರಡನ್ನು ತೆಗೆದಿದ್ದೆವು.ಅಲ್ಲಿ ಚೆಕ್ ಮಾಡುವ ಮಹಿಳೆಗೆ ಇವನನ್ನು ನೋಡಿ ಅನುಮಾನ ಮತ್ತೆ ಯಾರನ್ನೊ ಕರೆಸಿ ಚೆಕ್ ಮಾಡಿಸಿ ಅಂತೂ ಒಳಗೆ ಬಿಟ್ಟಳು.ಒಳಗಡೆ ಹೋದರೆ ಭದ್ರತಾ ತಪಾಸಣೆಗೆ(ಸೆಕ್ಯೂರಿಟಿ ಚೆಕ್) ಇನ್ನೂ ದೊಡ್ಡ ಸಾಲು.೨೫-೩೦ಜನರು ನಮ್ಮ ಮುಂದಿದ್ದರು.ಆಗ ಟೈಂ ೧೦ ಗಂಟೆ."ಸೆಕ್ಯೂರಿಟಿ ಅವರಹತ್ರ ೧೦ಗಂಟೆ ಫ್ಲೈಟ್ ಅಂತ ಹೇಳಿ ನಮ್ಮನ್ನು ಮುಂದೆ ಬಿಡ್ತಾರೆನೂ"ಅಂದೆ. ಕೇಳಿದ್ದಾಯ್ತು, "ಪರವಾಗಿಲ್ಲ ಅವರೆಲ್ಲರೂ ಅದೇ ಫ್ಲೈಟಿಗೆ ಹೋಗೊದು"ಅವರಂದ್ರು.ಈಗ ನಮಗೆ ನಿರಾಳವಾಗಿತ್ತು. "ಉಸ್ಸಪ್ಪಾ ಬದ್ಕದ್ವಿ"ಅನ್ಕೊಂಡೆ."ಕ್ಯಾಬಿನ್ ಬ್ಯಾಗಲ್ಲಿ ಏನೂ ಇರಬಾರದು,ನೀರು, ಹಣ್ಣು,ತಿಂಡಿ ಏನೇ ದ್ರವರೂಪದ ವಸ್ತು ಇದ್ದರು ಎಸೆದು ಬಿಡ್ತಾರೆ"ಎಂದು ಎಲ್ಲರು ಹೇಳಿದ್ದರಿಂದ ಏನೂ ಇಟ್ಟಿರಲಿಲ್ಲ. ಸಿಂಧೂರನ ಒಂದು ಜೊತೆ ಬಟ್ಟೆ,ಒಂದು ಟವೆಲ್ ಮತ್ತು ಕಾಗದ ಪತ್ರಗಳು ಮಾತ್ರ. ಬೇಕಾದರೆ ಇರಲಿ ಎಂದು ಒಂದು ಬಾಚಣಿಗೆ ಮತ್ತು ಒಂದು ಕ್ರಿಂ ಹಾಕಿಟ್ಟಿದ್ದೆ.ಕ್ರಿಂ ಬಿಡ್ತಾರೂ ಇಲ್ವೊ ಅಂತ ಅನುಮಾನ.ಇರಲಿ ಅಂತ ಸೆಕ್ಯೂರಿಟಿಯವರನ್ನೇ ಕೇಳಿದೆ."ಪರವಾಗಿಲ್ಲಾ" ಅಂದರು.ಸೆಕ್ಯೂರಿಟಿ ಚೆಕ್ ಮುಗಿದು ಗೆಟ್ ನಂಬರ್ ೪ಕ್ಕೆ ಹೋಗಬೇಕಿತ್ತು.ತುಂಬಾ ಜನ. ಮಗು ಇರುವುದರಿಂದ ನಮ್ಮನ್ನು ಮೊದಲೆ ಒಳಗಡೆ ಬಿಟ್ಟರು.ಅಲ್ಲೆ ಆಗಿದ್ದು ಎಡವಟ್ಟು.ಆರಾಮವಾಗಿ ಮೆಟ್ಟಿಲಿಳಿದು ಕೆಳಗಡೆ ಹೋದೆವು.ಅಲ್ಲಿ ಮತ್ತೆ ಕ್ಯೂ, ಕ್ಯೂನಲ್ಲಿ ಒಳಗಡೆ ಹೋದರೆ,"ನಿಮ್ಮ ಫಾರಂ ಎಲ್ಲಿ"ಆತ ಕೆಳಿದ."ಹೊರಗಡೆನೇ ತಗೊಂಡ್ರು""ಸರಿ ಮತ್ತೆ ಫಾರಂ ತುಂಬಿ ಕೊಡಿ"ಮತ್ತೆ ಒಂಭತ್ತು ಫಾರಂ ಕೊಟ್ಟ.ಸಿಂದೂರನಿಗೆ ನಿದ್ರೆ ಬಂದಿದ್ದರಿಂದ ಅಲ್ಲೆ ಬಿದ್ದು ಹೊರಳಾಡುತ್ತ ಹಠ ಶುರುಮಾಡಿದ್ದ.ಫಾರಂ ತುಂಬಿ ಕೊಟ್ಟಿದ್ದಾಯ್ತು,"ನೀವು ಎಲ್ಲಿಗೆ ಹೊರಟಿರೊದು?"ಆತ ಕೇಳಿದ."ನ್ಯೂಯಾರ್ಕಗೆ"ಅಂದ್ವಿ."ಹಾಗಾದ್ರೆ ಇಲ್ಲಿಗೆ ಯಾಕೆ ಬಂದ್ರಿ,ಇದು ನ್ಯೂಯರ್ಕನಿಂದ ಬೆಂಗಳೂರಿಗೆ ಹೊರಟಿರೊದು"ಅಯ್ಯೋ ರಾಮಾ ಭೂಮಿನೆ ಬಾಯಿಬಿಟ್ಟ ಅನುಭವ.ಟೈಂ ಅಗಿದೆ.ನಮ್ಮ ಮುಖ ನೋಡಿ ಅವನೆ ಊಹಿಸಿದ."ಮೇಲ್ಗಡೆ ಹೋಗಿ"ಎಂದು ದಾರಿ ತೋರಿಸಿದ.ಮತ್ತೆ ಮೆಟ್ಟಿಲು ಹತ್ತಿ ಮೇಲ್ಗದೆ ಓಡತೊಡಗಿದೆವು.ಸಿಂಧೂರ"ನಾನು ನಡೆದು ಬರ್ತೀನಿ"ಎಂದು ಹಠ ಶುರುಮಾಡಿದ್ದ.ಸಿಂಧೂರ್ ಮತ್ತು ಕ್ಯಾಬಿನ್ ಬ್ಯಾಗ್ ಎರಡನ್ನು ದರದರನೆ ಎಳೆದುಕೊಂಡೆ ಓಡತೊಡಗಿದೆ."ಇಲ್ಲ ನನ್ನಿಂದ ಓಡಲು ಸಾಧ್ಯವೇ ಇಲ್ಲಾ,ಕಾಲುಗಳಲ್ಲಿ ಶಕ್ತಿಯೇ ಇಲ್ಲ"ಎನ್ನಿಸಿಬಿಡ್ತು.ಅಂತೂ ಓಡಿಹೋಗಿ ಮೇಲಿನ ಕ್ಯೂನಲ್ಲಿ ನಿಂತೆವು. ಗಂಟಲು ಒಣಗಿ ಕೆಮ್ಮು ಶುರು ಅಗಿತ್ತು.ಆ ಜನಜಂಗುಳಿಯ ನಡುವೆಯೂ ನನ್ನ ಹೃದಯಬಡಿತದ ಹೊರತಾಗಿ ನನಗೆ ಬೇರೆ ಎನೂ ಕೇಳುತ್ತಿರಲಿಲ್ಲ.ಅಬ್ಬಾ ಆ ಟೆನ್-ಷನ್ ಪದಗಳಿಂದ ಹೇಳಲು ಸಾಧ್ಯವೇ ಇಲ್ಲ.ಅಲ್ಲಿ ಮತ್ತೊಮ್ಮೆ ನಮ್ಮ ಬ್ಯಾಗ್,ಚಪ್ಪಲಿ ಮತ್ತು ನಮ್ಮನ್ನು ಬೇರೆ ಬೇರೆಯಾಗಿ ಚೆಕ್ ಮಾಡಲಾಯಿತು. ಅಂತೂ ಕ್ವಾಂಟಿನೆಂಟಲ್ ವಿಮಾನ ಹತ್ತಿದ್ದೆವು.ಅಲ್ಲಿಗೆ ಸಮಯ ರಾತ್ರಿ ೧೧.೩೦.



ವಿಮಾನಿನ ಸೀಟುಗಳು ನಮ್ಮ ವಿ.ಆರ್.ಎಲ್.ಬಸ್ಸಿನ ಸೀಟುಗಳಂತೆ ಇತ್ತು.ಆದ್ರೆ ಇಲ್ಲಿಯವರೆಗೆ ನಾನು ನೋಡಿದ ವಿಮಾನುಗಳಲ್ಲಿ ಒಂದು ಸಾಲಿನಲ್ಲಿ ೪-೫ಸೀಟುಗಳಿದ್ದವು.ಇದು ದೊಡ್ಡ ವಿಮಾನು,ಒಂದು ಸಾಲಿನಲ್ಲಿ ೧೮-೨೦ಸೀಟುಗಳಿತ್ತು.ಅಂದರೆ ನಮ್ಮ ೪ಬಸ್ಸುಗಳನ್ನು ಕೂಡಿಸಿದಸ್ಟು ಅಗಲ.೬-೭ಬಸ್ಸುಗಳನ್ನು ಕೂಡಿಸಿದಸ್ಟು ಉದ್ದ.


ಅಂತೂ ವಿಮಾನು ಹೊರಟಾಗ ರಾತ್ರಿ ೧೨ಗಂಟೆ. ಸಿಂಧೂರ ಹಾಗೆ ನಿದ್ದೆ ಮಾಡಿದ್ದ.ಈಗ ನಮಗೂ ಹಸಿವಿನ ನೆನಪಾಗಿತ್ತು;ಮಧ್ಯಾಹ್ನ ಉಂಡಿದ್ದಸ್ಟೆ ಬೆರೆನೂ ತಿಂದಿರಲಿಲ್ಲ.ಸುಮಾರು ಒಂದು ಗಂಟೆಯ ಹೊತ್ತಿಗೆ ಗಗನಸಖಿ ತಿಂಡಿ ತಂದಳು.ಅದರಲ್ಲಿ ಇದ್ದಿದ್ದೇನು;ಒಂದು ಬ್ರೆಡ್ ಒಂದು ಚಾಕಲೇಟ್,ಒಂದು ಫಫ್ ತರಹ ಕರಿದಿದ್ದು.ಜ್ಯೂಸ್ ಅಂದ್ರೆ ಒಂದು ಹುಳಿಹುಳಿಯಾದ ದ್ರವ.ಅದರ ಹೆಸರು ಮಾತ್ರ ಒರೆಂಜ್ ಜ್ಯೂಸ್.(ಆಮೇಲೆ ಗೊತ್ತಯ್ತು,ಈ ಅಮೇರಿಕಾದಲ್ಲಿ ಸಸ್ಯಾಹಾರಿಗಳಿಗೆ ಸಿಗೊದೇ ಇಸ್ಟು ಅಂತ.)


ಗಗನಸಖಿ:"ಗಗನ ಸಖಿ ಅಂದರೆ ಎಲ್ಲರಿಗೂ ಒಂದು ಸುಂದರ ಕಲ್ಪನೆಗಳಿರುವುದು ಸಹಜ.ನಮ್ಮ ದೇಸಿಯ ವಿಮಾನಿನಲ್ಲಿನ ಗಗನಸಖಿಯರನ್ನು ನೋಡಿದಾಗ ಅಂತಾ ಏನೂ ಇರಲ್ಲಾ,ಆದ್ರೂ ಪರವಾಗಿಲ್ಲ ಅಂದುಕೊಂಡಿದ್ದೆ.೨೦-೨೫ ವರ್ಷದೊಳಗಿನ ನಗುಮುಖದ ಹುಡುಗಿಯರಿದ್ದರು.ಆದ್ರೆ ಇಲ್ಲಿ ಹಾಗಿರಲಿಲ್ಲ.೩೦-೪೦ ವರ್ಷದ ಹೆಂಗಸರು.ಅವರ ಡ್ರೆಸ್, ಆ ಕೆದರಿದ ಕೂದಲು ಅದು ಯಾವ ಫಾಶನ್ ಅಂತ ಗೊತ್ತಿಲ್ಲ.ಒಬ್ಬಳನ್ನು ಬಿಟ್ಟು ಉಳಿದವರೆಲ್ಲ ಒಣಮುಸಡಿಗಳೆ.


ಇಂಗ್ಲೀಷ್ ಭಾಷೆಯಲ್ಲಿಥ್ಯಾಂಗ್ಸ್, ಸ್ಸಾರಿ, ಇಂತಹ ತುದಿಬಾಯಿಯಲ್ಲಿ ಹೇಳಿಬಿಡುವ ಪದಗಳೆ ಜಾಸ್ತಿ.ಇದನ್ನೆಲ್ಲಾ ನೆನಪು ಮಾಡಿ ಹೇಳು ಎಂದು ಗಣಪತಿ ಹೇಳಿದ್ದ.ಆದ್ರೆ ನನಗೆ ಇದು ಮರತಿದ್ದೆ ಜಾಸ್ತಿ.ರಾತ್ರಿ ೧೨ಗಂಟೆಯಿಂದ ಇನ್ನೊಂದು ಸಂಜೆ ೭ಗಂಟೆ,ಅಂದರೆ ೧೮ತಾಸುಗಳ ಪ್ರಯಾಣ ಅದಾಗಿತ್ತು.ಡೆಲ್ಲಿಯಿಂದ ಹೊರಟಾಗ ಅಲ್ಲಿನ ರಾತ್ರಿ ಇಲ್ಲಿಗೆ ಬಂದಾಗ ಇಲ್ಲಿನ ರ್‍ಆತ್ರಿ ಅಂದರೆ ನಾವು ವಿಮಾನಿನಲ್ಲಿ ೧೮ ತಾಸುಗಳು ಕಳೆದರೂ ಸೂರ್ಯನ ಬೆಳಕನ್ನೆ ಕಾಣದೆ ಬರಿ ರಾತ್ರಿಯಲ್ಲೆ ಬಂದೆವು.ಇದೊಂದು ವಿಚಿತ್ರ ಅನುಭವ.ಮಧ್ಯೆ ಮಧ್ಯೆ ಹುಳಿಯಾದ ಜ್ಯೂಸ್ ಜೊತೆಗೆ ತಿನ್ನಲು ಬಾರದಂತಹ ತಿಂಡಿಗಳು.


ಇಲ್ಲಿನ ಟಾಯ್ಲೆಟ್ ಬಗ್ಗೆ ಹೇಳಲೇ ಬೇಕು.೪-೫ ಟಾಯ್ಲೆಟಗಳು; ಅಲ್ಲಿ ಕ್ಯೂನೆ ಜಾಸ್ತಿ.ಒಮ್ಮೆ ಖಾಲಿ ಇರೂದನ್ನು ಕಂಡು ಹೋಗೊಣ ಅಂದೊಕೊಂಡರೆ ಬಾಗಿಲೇ ತೆಗಿಯೊಕೆ ಬರ್ತಾ ಇಲ್ಲ."ಹ್ಯಾಂಗೆ ತೆಗಿಯದು?" ಗಪ್ಪತಿಯನ್ನು ಕರೆದು ಕೇಳಿದ್ದೆ.ಆಗಲೆ ಯಾರೊ ಒಳಗೆ ಹೋಗಿಬಿಟ್ಟಿದ್ದರು. "೧೫ನಿಮಿಷ ಆದ್ರೂ ಹೊರಗೆ ಬರದೆ ಹೋದ್ರೆ ನೀವೆ ಹೊರಗಡೆಯಿಂದ ತೆಗಿರಿ"ಎಂದು ಹೇಳಿ ಹೋಗಿದ್ದೆ.ಇಲ್ಲಿನ ದೊಡ್ಡ ಸಮಸ್ಯೆ ನೀರಿಲ್ಲದಿರುವುದು.ಕೈ ತೊಳಿಯೊದಕ್ಕೆ ಮಾತ್ರ ಸಣ್ಣದಾದ ನಲ್ಲಿ ಇತ್ತು.ಬಿಟ್ಟರೆ ದೊಡ್ಡದಾದ ಪೇಪರ್ ಬಂಡಲ್. ಆ ಪೇಪರನ್ನೂ ಕಸದ ಬುಟ್ಟಿಗೆ ಹಾಕಬೇಕು. ಆ ಕಸದ ಬುಟ್ಟಿ ಮುಚ್ಚಳ ಹೇಗೆ ತೆಗಿಯೊದು ಅಂತಾನೆ ಗೊತ್ತಾಕ್ತಾ ಇಲ್ಲಾ.ಜೊತೆಗೆ ಕಮೊಡ್ ತರದ ಟಾಯ್ಲೆಟ್. ಯಾರು ಯಾರು ಅದರ ಮೇಲೆ ಕೂತಿರ್ತಾರೊ..ನಾವು ಅದರ ಮೇಲೆ ಕೂರಬೇಕಾ...?ಜೊತೆಗೆ ಹೊಸದಾದ ಜೀನ್ಸ್ ಪ್ಯಾಂಟ್: ಚೂಡಿದಾರ್ ತರಹ ಸುಲಭ ಅಲ್ಲ.


ಅಂತೂ ನಮ್ಮಲ್ಲಿನ ಸಂಜೆ ೭ಗಂಟೆ ಅಂದ್ರೆ ಅಲ್ಲಿನ ಬೆಳಗಿನಜಾವ ೬ಗಂಟೆಗೆ ನ್ಯೂಯಾರ್ಕ್ ಸೇರಿದೆವು.ಮತ್ತೆ ಒಬ್ಬೊಬ್ಬರಿಗೆ ಮೂರರಂತೆ ೯ ಫಾರಂ ತುಂಬಬೇಕಿತ್ತು.ಈ ಫಾರಂನ್ನು ವಿಮಾನಿನಲ್ಲೆ ಕೊಡುತ್ತಾರೆ.ವಿಮಾನಿಳಿದು ಕ್ಯೂದಲ್ಲಿ ನಿಂತಾಗಿತ್ತು.ಅದರೆ ನಾವು ತುಂಬಿದ್ದು ಮೂರೇ ಫಾರಂ."ಒಂದು ನಿಮಿಷ ಇಲ್ಲೇ ಇರಿ."ಎಂದು ಗಣಪತಿ ಮತ್ತೆ ಫಾರಂ ತರಲು ಓಡಿ ಹೋದ.ಕ್ಯೂದಲ್ಲಿ ಮುಂದಿದ್ದವರು ಎಲ್ಲರಿಗಿಂತ ಹಿಂದಾದೆವು.ಹದಿನೈದು ನಿಮಿಷವಾದರೂ ಬರಲೇ ಇಲ್ಲ. ನನ್ನ ಕೈನಲ್ಲಿ ವಿಸಾ ಪಾಸಪೊರ್ಟ್ ಯಾವುದು ಇಲ್ಲಾ;ಜೊತೆಗೆ ಒಂದು ಡಾಲರ್ ಕೂಡ ಇರಲಿಲ್ಲ.ನಿಜವಾಗಲೂ ಹೆದ್ರಿಕೆ ಶುರು ಆಗಿತ್ತು. ಜೊತೆಗೆ ಸಿಂಧೂರನ ಹಠ ಶುರು ಆಗಿತ್ತು. ಅಂತೂ ಬಂದ.ಮತ್ತೆ ಕ್ಯೂನಲ್ಲಿ ನಿಂತೆವು. "ಫಾರಂ ತುಂಬಿದ್ದು ಸರಿ ಆಜಿಲ್ಲೆ"ಎಂದು ಮತ್ತೆ ಒಂಭತ್ತು ಫಾರಂ ತುಂಬುವ ಹೊತ್ತಿಗೆ ಮತ್ತೆ ೧೫ ನಿಮಿಷ.ನಮ್ಮ ಜೊತೆ ಬಂದವರೆಲ್ಲಾ ಹೋಗಿ ಬೇರೆ ವಿಮಾನದಲ್ಲಿ ಬಂದವರು ಕ್ಯೂ ನಿಂತಿದ್ದರು.ಸಿಂಧೂರ್ ಜೋರಾಗಿ ಅಳೊದಕ್ಕೆ ಶುರು ಮಾಡಿದ್ದ.ಅಲ್ಲಿರುವ ಲೇಡಿ "ಶ್-ಶ್’ಅನ್ನುತ್ತಿದ್ದಳು. ಎಲ್ಲರೂ ನನ್ನನ್ನೇ ನೋಡುತ್ತಿರುವ ಅನುಭವ. ಅಲ್ಲೇ ಜೋರಾಗಿ ನಾಲ್ಕು ಬಾರಿಸಿಬಿಡುವ ಎನ್ನುವಷ್ಟು ಸಿಟ್ಟು ಬಂದಿತ್ತು.ಆದರೆ ಎಲ್ಲರೆದುರಿಗೆ ಇದು ಸಾಧ್ಯವಿಲ್ಲ; ಜೊತೆಗೆ ಬಾರಿಸಿದರೂ ಸುಮ್ಮನಿರುವ ಸ್ಥಿತಿಯಲ್ಲಿ ಅವನಿರಲಿಲ್ಲ. ತುಂಬಾ ಸುಸ್ತು, ಜೊತೆಗೆ ನಿದ್ದೆ ಬಂದಿತ್ತು.


"ಮತ್ತೆ ಫಾರಂ ತುಂಬಿ ಕ್ಯೂನಲ್ಲಿ ಬನ್ನಿ"ಫಾರಂ ಚೆಕ್ ಮಾಡಿ ಅಲ್ಲಿರುವ ಅಫೀಸರ್ ಹೇಳಿದ.ಮತ್ತೆ ಒಂಭತ್ತು ಫಾರಂ ತುಂಬಿ ನಮ್ಮ ವೀಸಾ ಪಾಸಪೊರ್ಟ್, ಕೈಬೆರಳ ಅಚ್ಚು ಎಲ್ಲವನ್ನು ಚೆಕ್ ಮಾಡಿ ದಾಟಿ ಬರುವವರೆಗೆ ೭.೧೫. ಸಿಂಧೂರನ ರಂಪ ಇನ್ನೂ ಜೋರಾಗಿತ್ತು;ಜೊತೆಗೆ ನಮ್ಮ ಲಗ್ಗೆಜಬ್ಯಾಗ್ ಎಲ್ಲಿ ಅಂತ ಕಾಣ್ತಾನೇ ಇಲ್ಲ. ಅದನ್ನು ಹುಡುಕಿ ಟ್ರ್ಯಾಲಿಯಲ್ಲಿ ಹಾಕಿಕೊಂಡು ಹ್ಯೂಸ್ಟನ್ ಹೋಗೊ ವಿಮಾನವೆಲ್ಲಿ ಎಂದು ಹುಡುಕಿಕೊಂಡು ಹೊರ್‍ಅಟೆವು. ನೋಡಿದ್ರೆ ನಮ್ಮ ಬ್ಯಾಗಲ್ಲಿ ಆಹಾರವಸ್ತುಗಳಿರುವುದರಿಂದ ಮತ್ತೆ ಲೇಸರ್ ಟೆಸ್ಟ್ ಆಗಬೇಕು. "ಬೆಂಗಳೂರಿನಲ್ಲಿ ನಿಮ್ಮ ಲಗ್ಗೆಜ್ ಬ್ಯಾಗ್ ಚೆಕ್ ಮಾಡಿಸಿ ಕೊಟ್ಟರೆ ಆಯ್ತು, ಆಮೇಲೆ ಹ್ಯೂಸ್ಟನ್ಗೆ ಹೋಗಿ ತಗೋಳೊದು" ಎಂದು ಎಲ್ಲರು ಹೇಳಿದ್ದರು. ಆದ್ರೆ ನಮಗೆ ಹಾಗಾಗಲಿಲ್ಲ.ಎಲ್ಲಕಡೆಯೂ ನಾವೆ ಎತ್ತಿಕೊಂಡು ಮತ್ತೆ ಚೆಕ್ ಮಾಡಿಸಿ ಮತ್ತೆ ಕಳಿಸಿದ್ದೆವು. ಸರಿ ಬ್ಯಾಗನ್ನು ಹ್ಯೂಸ್ಟನ್ಗೆ ಹೋಗೊ ಲಗ್ಗೆಜಿಗೆ ಕೊಟ್ಟು ನಾವು ವಿಮಾನು ಯಾವ ಗೆಟಿನಲ್ಲಿ ಅಂತ ಹುಡುಕುತ್ತಾ ಮೆಟ್ಟಿಲೇರಿ ಓಡತೊಡಗಿದೆವು.ಆಗ ಸಮಯ ೭.೩೦. ೧೫ ನಿಮಿಷ ಮಾತ್ರ ಬಾಕಿ. ಮೇಲೆ ಚೆಕ್ ಮಾಡುತ್ತಿರುವ ಲೇಡಿ ಕೇಳಿದಳು"ಬೊರ್ಡಿಂಗ್ ಪಾಸ್ ಎಲ್ಲಿ?" (ಬೊರ್ಡಿಂಗ್ ಪಾಸ್ ಎಂದರೆ ನಮ್ಮ ವಿಮಾನ ಟಿಕೆಟನ್ನು ಅವರಿಗೆ ಕೊಟ್ಟು, ಅವರಿಂದ ಒಂದು ಪಾಸ್ ತೆಗೆದುಕೊಳ್ಳಬೇಕು. ಪ್ರತಿ ವಿಮಾನನ್ನು ಹತ್ತುವಾಗಲು ಹೀಗೆ ಮಾಡಿಕೊಳ್ಳಬೇಕು.


"ಇಲ್ಲಿ ಬೊರ್ಡಿಂಗ್ ಪಾಸ್ ಎಲ್ಲಿಕೊಡ್ತಾರೆ" ನಾವು ಕೇಳಿದ್ರೆ ಅವಳು ಎನು ಅರ್ಥಮಾಡಿಕೊಂಡಳೊ ಎನೋ,"ಅಲ್ಲಿ"ಎಂದು ಕೈ ತೋರಿಸಿದಳು.ಅಲ್ಲೊಂದು ಉದ್ದವಾದ ಕ್ಯೂ. ಆ ಕ್ಯೂದಲ್ಲಿ ನಿಂತರೆ ನಿಜವಾಗ್ಲೂ ನಮಗೆ ವಿಮಾನ ತಪ್ಪಿ ಹೋಗುತ್ತದೆ;ಜೊತೆಗೆ ಅಲ್ಲಿ ಪಾಸ್ ಕೊಡ್ತಾ ಇದಾರೆ ಅಂತ ನಮಗೆ ಅನಿಸಲಿಲ್ಲ. ಮತ್ತೆ ಯಾರನ್ನೂ ಕೇಳಿದೆವು. ಪಾಸ್ ಕೇಳಗಡೆ ಕೊಡ್ತಾರೆ ಅಂತ ಅಂದ್ರು. ಮತ್ತೆ ಕೆಳಗಡೆ ಓಡಿದ್ದಾಯ್ತು. ಮತ್ತೆ ಸಿಂಧೂರನ ಹಠ ಇನ್ನೂ ಜೋರಾಗಿತ್ತು. ಮತ್ತೆ ಬೊರ್ಡಿಂಗ್ ಪಾಸ್ ಎದುರುಗಡೆ ನಿಂತುಕೇಳಿದ್ರೆ, ಅಲ್ಲಿನ ಆಫೀಸರ್ ನಯವಿನಯವಾದ ಅದರೆ ಉಪಯೋಗಕ್ಕೆ ಬಾರದ’"ಸ್ಸಾರಿ ಬೊರ್ಡಿಂಗ್ ಪಾಸ್ ಎಲ್ಲ ಖಾಲಿ ಆಗಿದೆ. ನೀವು ಸಂಜೆ ೬ಗಂಟೆಗೆ ಒಂದು ವಿಮಾನವಿದೆ ಅದಕ್ಕೆ ಹೋಗಿ, ಇಲ್ಲವಾದರೆ ಒಂದು ಗಂಟೆಗೆ ಇಲ್ಲಿಂದ ಬೇರೆ ಊರಿಗೆ ಹೋಗಿ, ಅಲ್ಲಿಂದ ೪ಕ್ಕೆ ಹ್ಯೂಸ್ಟನ್ಗೆ ವಿಮಾನವಿದೆ. ಸಂಜೆ ೬ಕ್ಕೆ ಹ್ಯೊಸ್ಟನ್ನಿಗೆ ಹೋಗಬಹುದು." ಆತನೆಂದ.


ಆಗ ಸಮಯ ಬೆಳಿಗ್ಗೆ ೮ಗಂಟೆ. ಇನ್ನೂ ೫ ತಾಸು ಅಲ್ಲೇ ಕುಳಿತುಕೊಳ್ಳಬೇಕಿತ್ತು. ಸಿಂಧೂರ್ ಅತ್ತು-ಅತ್ತು ಕೈಯಲ್ಲೇ ಮಲಗಿಬಿಟ್ಟಿದ್ದ. ಈ ವಿಮಾನ ತಪ್ಪಿದ್ದಕ್ಕೆ ಉಚಿತವಾಗಿ ೧೮ ಡಾಲರಿನಷ್ಟು ತಿನ್ನುವ ಪರಿಹಾರ ಸಿಕ್ಕಿತ್ತು. ಯಾರಿಗೂ ಸರಿಯಾದ ಹಸಿವೆ ಆಗಿರಲಿಲ್ಲ. ೫-೬ ಡಾಲರ್ ಖಾಲಿ ಮಾಡಿದ್ದೆವಸ್ಟೆ ಮತ್ತೆಲ್ಲಾ ಹಾಗೆ ಬಿಟ್ಟುಬಂದೆವು. ಈ ಬೊರ್ಡಿಂಗ್ ಪಾಸ್ ಸಿಗದಿದ್ದಕ್ಕೆ ನಮಗೆ ೧೨೦೦ಡಾಲರ್ ಉಚಿತವಾಗಿ ಸಿಕ್ಕಿತ್ತು. ಒಂದು ವರ್ಷದ ಒಳಗಡೇ ಈ ಕಂಪನಿಯ ವಿಮಾನಿನಲ್ಲಿ ೧೨೦೦ ಡಾಲರ್ (ಅಂದ್ರೆ ಐವತ್ತು ಸಾವಿರ ರೂಪಾಯಿ)ಹಣದ ಟಿಕೆಟನ್ನು ಉಚಿತವಾಗಿ ಪಡೆಯಬಹುದಿತ್ತು. ಕಾಯಿಸಿದರೂ ಪರವಾಗಿಲ್ಲ, ಒಂದು ಪ್ರವಾಸನಾದ್ರೂ ಮಾಡಬಹುದು ಎಂದುಕೊಂಡೆ. ಸರಿ ಮತ್ತೆ ನ್ಯೂಯಾರ್ಕಿನಿಂದ ಅದ್ಯಾವುದೊ ಊರಿಗೆ ಹೊರಟೆವು. ಮತ್ತೆ ಸೆಕ್ಯೊರಿಟಿ ಚೆಕ್; ನಮ್ಮ ಬ್ಯಾಗ್ ಚಪ್ಪಲಿ ಎಲ್ಲ ಕಳಚಿ ಚೆಕ್ಕಿಗೆ ಕೊಟ್ಟು ನಾವು ಬೇರೆ ಆಗಿ ಚೆಕ್ ಆಗಬೇಕಿತ್ತು. ಜೊತೆಗೆ ಈ ಮನುಷ್ಯ ನನ್ನ ಬಳೆಗಳನ್ನು ಬಿಚ್ಚಿಸಿ ಚೆಕ್ ಮಾಡಿದ್ದ. ಇದು ತುಂಬಾ ಚಿಕ್ಕದಾದ ವಿಮಾನು. ನಮ್ಮ ಬಸ್ಸಿನಸ್ಟು ಉದ್ದ ಅಗಲ. ಅಲ್ಲಿರುವ ಗಗನ ಸಖಿ ನೋಡಿದರೆ ಭಯವಾಗುತ್ತಿತ್ತು. ಕಿತ್ತು ಬಂದುಬಿಡತ್ತೆನೋ ಎನ್ನುವಂತಹ ಕಣ್ಣುಗುಡ್ಡೆ,ನಿಗ್ರೂ-ಕಪ್ಪುಬಣ್ಣ, ಬೆನ್ನಿನಮೇಲೆ ಬುಟ್ಟಿ ಮಗುಚಿಟ್ಟಿರುವಂತಹ ಕುಂಡೆ! ೬ಫೂಟ್ ಎತ್ತರ, ೪ಫೂಟ್ ದಪ್ಪ, ಅವಳ ತುಟಿಗಳು ಮೂಗಿನಿಂದ ನಾಲ್ಕು ಇಂಚು ಮುಂದೆ, ಆತುಟಿಗೆ ಹತ್ತುನಿಮಿಷಕ್ಕೊಮ್ಮೆ ಬಳಿದು ಕೊಳ್ಳುವ ಲಿಪಸ್ಟಿಕ್, ಮಿಡಿನೊ ಮ್ಯಾಕ್ಸಿನೂ ಒಂದು ಡ್ರೆಸ್. ಸರಿ ಈ ವಿಮಾನಿನಲ್ಲಿ ಮೂರು ಗಂಟೆ ಪ್ರಯಾಣ. ಆ ಊರಿಗೆ ಹೋಗುವವರೆಗೆ ಮಧ್ಯಾನ್ಹ ಮೂರು ಗಂಟೆ. ಅಂದ್ರೆ ಭಾರತದಲ್ಲಿ ಮಧ್ಯರಾತ್ರಿ.ನಾವು ಹೊರಟು ಆಗಲೇ ೩೬ತಾಸುಗಳು ಕಳೆದಿತ್ತು. ನಿದ್ದೆ,ಸರಿಯಾದ ಊಟ ಇಲ್ಲದೇ ಸುಸ್ತಾಗಿತ್ತು.ಆ ಊರು ತುಂಬ ಸುಂದರವಾಗಿತ್ತು;ಜೊತೆಗೆ ತುಂತುರು ಮಳೆ ಬರುತಿತ್ತು. ಹೊರಗಡೆ ತುಂಬಾ ಚಳಿ.ಅಲ್ಲಿಂದ ಇನ್ನೊಂದು ವಿಮಾನ ಹತ್ತಿದೆವು. ಇದು ಕೂಡ ಚಿಕ್ಕ ವಿಮಾನ.ಈ ಗಗನಸಖಿ ಬೆಳ್ಳಗಿನ ಅಜ್ಜಿ;ಆದರೆ ನಗುಮುಖ. ಇಲ್ಲಿಗೆ ನಾವು ನಾಲ್ಕು ವಿಮಾನಗಳನ್ನು ಹತ್ತಿಯಾಗಿತ್ತು. ವಿಮಾನವೆಂದರೆ ವಾಕರಿಕೆ ಬರುವಂತಾಗಿತ್ತು. ಬಸ್ಸಿನಲ್ಲಾದರೂ ಕುಳಿತುಕೊಳ್ಳಬಹುದು ಈ ವಿಮಾನದಲ್ಲಿ ಸಾಧ್ಯವೇ ಇಲ್ಲ ಅನ್ನಿಸಿ ಬಿಡ್ತು. ವಿಪರೀತ ಸುಸ್ತು;ಜೊತೆಗೆ ಜೀವನದಲ್ಲೇ ಕಾಣದಂತಹ ನಿದ್ರೆ. ಕಣ್ಣುರೆಪ್ಪೆಗಳು ನನ್ನ ಹಿಡಿತಕ್ಕೆ ಸಿಗದೆ ಹಾಗೆ ಮುಚ್ಚಿಬಿಡುತ್ತಿದ್ದವು. ಸಿಂಧೂರನಿಗೆ ನಿದ್ರೆ ಮುಗಿದು ಸರಿಯಾಗಿ ಎಚ್ಚರಗೊಂಡಿದ್ದ. "ಎದ್ಕ-ಎದ್ಕ" ಎಂದು ಕೆನ್ನೆಗೆ ಫಟೀರನೆ ಬಾರಿಸುತ್ತಿದ್ದ. ಕೈಚಿಕ್ಕದಾದರೂ ಉರಿ ಚಿಕ್ಕದಿರಲಿಲ್ಲ. ವಿಪರೀತ ಸುಸ್ತುಜೊತೆಗೆ ಮಗನಿಂದಲೇ ಆಗಾಗ ಕಪಾಳಮೋಕ್ಷ್ಯ! ವಿಮಾನು ಎನ್ನೊದನ್ನೂ ಕೂಡ ಮರೆತು ಅತ್ತುಬಿಟ್ಟೆ.


ಅಂತೂ ಹ್ಯೂಸ್ಟನ್ ವಿಮಾನನಿಲ್ದಾಣ ತಲುಪಿದೆವು. ನಮ್ಮ ಬ್ಯಾಗುಗಳು ನ್ಯೂಯಾರ್ಕನಿಂದ ಬೆಳಿಗ್ಗೆನೆ ಬಂದಿತ್ತು. ಮತ್ತೆ ಲಗ್ಗೆಜಗಾಗಿ ಹುಡುಕಾಟ ಶುರು. ಯಾರನ್ನೂ ಕೇಳಿದರೂ ಸರಿ ಉತ್ತರವಿಲ್ಲ. ಈ ವಿಮಾನನಿಲ್ದಾಣವೂ ನ್ಯೂಯಾರ್ಕಿನಂತೆ ತುಂಬ ದೊಡ್ಡದು. ಎಷ್ಟು ಉದ್ದ, ಎಷ್ಟು ಅಗಲ, ಎಷ್ಟು ಅಂತಸ್ಸು ಗೊತ್ತಿಲ್ಲ. ವಿಮಾನನಿಲ್ದಾಣದ ಒಳಗಡೆ ಓಡಾಡಲು ಇನ್ನೊಂದು ಟ್ರೈನು. ಆ ಟ್ರೈನ್ ಹತ್ತಿ ಇನ್ನೆಲ್ಲೊಇಳಿದು ಅಂತೂ ನಮ್ಮ ಬ್ಯಾಗನ್ನು ಹುಡುಕಿದ್ದಾಯ್ತು. ಇಲ್ಲಿಗೆ ನಾವು ಬೆಂಗಳೂರಿನಿಂದ ಹೊರಟು ೪೦-೪೨ ತಾಸುಗಳು ಕಳೆದಿತ್ತು. ನಾವು ಹೋಗಬೇಕಾದ ಊರು "ಶುಗರ್-ಲ್ಯಾಂಡ್".ಇದು ವಿಮಾನನಿಲ್ದಾಣದಿಂದ ಒಂದು ತಾಸಿನ ದಾರಿ. ಸರಿ,ಕ್ಯಾಬ್ ಹತ್ತಿ ಹೊರಟೆವು. ಅಮೇರಿಕಾ ಹ್ಯಾಗಿದೆಯೆಂದು ನಾನು ಆಕಡೆ ಈಕಡೆ ನೋಡತೊಡಗಿದ್ದೆ. ನಿಜವಾಗ್ಲೂ ಆಶ್ಚರ್ಯವಾಗಿತ್ತು. ಈ ದೇಶ ಎಷ್ಟು ಸುಂದರವಾಗಿದೆ.ಎಲ್ಲಿ ನೋಡಿದರೂ ಸುಂದರ ಗಾರ್ಡನ್, ಮಧ್ಯ ಮಧ್ಯ ಸುಂದರ ಮನೆಗಳು. ಆದರೆ ಸ್ವಲ್ಪ ಸಮಯದಲ್ಲೆ ಈ ಕ್ಯಾಬ್ ಡ್ರೈವರ್ ಸರಿ ಇಲ್ಲ ಎನ್ನಿಸತೊಡಗಿತ್ತು. ನಿಜವಾಗ್ಲೂ ನಾವು ಹೊಗುವ ಸ್ಥಳಕ್ಕೆ ಮುಟ್ಟಿಸ್ತಾನಾ? ಅಂತ ಅನುಮಾನ ಶುರು ಆಗಿತ್ತು. ಎನು ಎತ್ತರ, ಎನು ದಪ್ಪ ನಮ್ಮಿಬ್ಬರನ್ನೂ ಒಂದೆ ಕೈಯಲ್ಲಿ ಎತ್ತಿಬಿಡುವಷ್ಟು ಧಡಿಯ. ಅಂತೂ ನಾವು ಹೋಗಬೇಕಾದ ಹೊಟೆಲ್ಲಿಗೆ ಮುಟ್ಟಿಸಿದ್ದ. ಆದ್ರೆ ಅಲ್ಲಿನ ಆಫೀಸರೂಂ ಬಾಗಿಲು ಹಾಕಿತ್ತು. ಬೆಂಗಳೂರಿನಿಂದಲೆ ಆನ್-ಲೈನಿನಲ್ಲಿ ಹೊಟೆಲರೂಂ ಬುಕ್ ಮಾಡಿದ್ದೆವು. ಹತ್ತಿರದಲ್ಲೆಲ್ಲೂ ಟೆಲಿಫೋನ್ ಬೂತ್ ಇರುವಂತೆ ಕಾಣಲಿಲ್ಲ."ನಿಮ್ಮ ಮೊಬೈಲಿಂದ ಒಂದು ಫೋನ್ ಮಾಡ್ಲಾ?" ಎಂದು ಆ ಕ್ಯಾಬ್ ಡ್ರೈವರನನ್ನೆ ಕೇಳಿ,ಅದಕ್ಕಾಗಿ ಮತ್ತೆ ಐನೂರು ರೂಪಾಯಿ ಜಾಸ್ತಿಕೊಟ್ಟು, ಗಣಪತಿ ಆಫೀಸಿನ ಸಹೊದ್ಯೋಗಿ ಒಬ್ಬರಿಗೆ ಫೋನ್ ಮಾಡಿದ.(ಇಲ್ಲಿ ನಮ್ಮ ದೇಶದತರ ಟೆಲಿಫೋನ್ ಭೂತ್-ಗಳು ಇರುವುದೇ ಇಲ್ಲ.) ಅವರು ಅವಸರ-ಅವಸರವಾಗಿ ಬಂದರು."ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ೯ಗಂಟೆಯ ನಂತರ ಪಾದಚಾರಿಗಳಿಗೆ ಭದ್ರತೆಇಲ್ಲ. ಬನ್ನಿ ಹೋಗೊಣ." ಎಂದು ನಮ್ಮನ್ನು ಇನ್ನೊಂದು ಹೊಟೆಲ್ ರೂಂಗೆ ಮುಟ್ಟಿಸಿ ಬೆಳೀಗ್ಗೆ ಆಫೀಸಿಗೆ ಹೋಗಲು ೮ ಗಂಟೆಗೆ ಬರುವುದಾಗಿ ಹೇಳಿ ಹೋದರು. ಆ ರೂಂನ ಒಂದು ದಿನದ ಬಾಡಿಗೆ ೪ಸಾವಿರ.



ಅಮೇರಿಕಾದಲ್ಲಿ..........

ಬೆಳಿಗ್ಗೆ ೮ಕ್ಕೆ ಗಣಪತಿ ಕಾರ್ತಿಕ್ ಜೊತೆ ಆಫೀಸಿಗೆ ಹೊರಟು ಹೋದರು. ಏನೋ ಒಂಥರಾ ಭಯ. ಬೆಳಿಗ್ಗೆ ರೂಂ ಕ್ಲೀನ್ ಮಾಡಲು ಬಂದವರಿಗೆ ಬಾಗಿಲು ತೆರೆಯದೆ "ಇಟ್ಸ್ ಓಕೆ" ಎಂದು ಹಾಗೆ ಕಳಿಸಿದ್ದೆ. ಫೋನ್ ಕೂಗತೊಡಗಿತ್ತು;ಎತ್ತಲೂ ಭಯ."ಹಲೊ"ಎಂದೆ. ಹೊಟೆಲ್ ರಿಸೆಪ್ಷನ್ ರೂಂನಿಂದ ಫೋನ್ ಬಂದಿತ್ತು. ಅವಳೇನೆಂದಳು ಅಂತ ದೇವ್ರಾಣೆಗೂ ಅರ್ಥ ಆಗ್ಲಿಲ್ಲ. "ಥ್ಯಾಂಕ್ಯೂ" ಎಂದು ಹೇಳಿ ಇಟ್ಟೆ. ಮತ್ತೆ ಫೋನ್ ಭಯ! ಈಸಾರಿ ಗಣಪತಿ ಮಧ್ಯಾನ್ನ ಊಟಕ್ಕೆ ಬರುವುದಾಗಿ ಹೇಳಿ ಫೋನ್ ಮಾಡಿದ್ದ.ಕುಕ್ಕರ್ ಕೂಗುವ ಹೊತ್ತಿಗೆ ಬಂದ."ಇಲ್ಲಿ ಹೊಗೆ ಬಂದರೆ ಅಗ್ನಿಶಾಮಕ ದಳದವರು ಬರ್ತವಡಾ ಸೊಕಾಶಿ" ಆಫೀಸಿಗೆ ಹೋಗುವಾಗ ಹೇಳಿ ಹೋಗಿದ್ದ. ಹೊಟೆಲ್ ಪರಿಸರ ತುಂಬ ಚೆನ್ನಾಗಿತ್ತು. ಸುತ್ತಲೂ ಹಸಿರುಹುಲ್ಲಿನ ಗಾರ್ಡನ್ ಮಧ್ಯೆ ಕಾರಂಜಿ. ದೂರದಲ್ಲಿ ಕಾಣುವ ಫ್ರೀವೆ(ಹೈವೆಗಿಂತ ಇನ್ನೂ ಜೊರಾಗಿ ಗಾಡಿ ಓಡಿಸುವ ರಸ್ತೆ.) ಅಲ್ಲಿ೧೨೦ಕಿ.ಮಿ ಜೋರಾಗಿ ಓಡುವ ಕಾರುಗಳು. ಹೀಗೆ ಅಮೇರಿಕಾ ಹೇಗಿದೆ ಅಂತ ಕಿಟಕಿ ಬಳಿ ನಿಂತು ಹೊರಗಡೆ ನೋಡ್ತಾ ಇದ್ದೆ.ನೋಡಿದ್ರೆ ಅಗ್ನಿಶಾಮಕ ದಳದ ಗಾಡಿ ಬರ್ತಾಇದೆ. ನಮ್ಮ ರೂಂ ಕೆಳಗಡೆನೇ ನಿಂತು ಬಿಡ್ತು. ಆ ಗಾಡಿಯ ಟ್ರಾಲಿ ನಮ್ಮ ರೂಂಕಡೆನೆ ಮೇಲೆ ಎರ್‍ತಾ ಇದೆ."ಅಯ್ಯೋ ರಾಮಾ ಆ ಟ್ರ್ಯಾಲಿ ನಮ್ಮ ರೂಂನ ಕಿಟಕಿ ಗಾಜಿನ ಎದುರುಗಡೆನೆ ನಿಂತು ಬಿಡ್ತು. ಅಲ್ಲಿರುವ ವ್ಯಕ್ತಿ ಕೈಯಲ್ಲಿರುವ ಡ್ರಿಲ್ಲರಿನಿಂದ ನಮ್ಮ ಕಿಟಕಿ ಗಾಜಿನ ತುದಿಯಿಂದ ಕೊರೆಯತೊಡಗಿದ್ದ. ನಮ್ಮರೂಮಿನಲ್ಲಿ ಹೊಗೆಯೆನೂ ಇರಲಿಲ್ಲ. ಮಧ್ಯಾನ್ನ ಒಂದು ಒಗ್ಗರಣೆ ಹಾಕಿದ್ದಷ್ಟೆ,ಎನ್ ಕತೆ ಹೃದಯವೆ ಬಾಯಿಗೆ ಬಂದಂತಾಗಿತ್ತು. ಅವನು ಅಲ್ಲೊಂದು ತೂತ ಕೊರೆದು ದಾರ ಒಳತೂರಿಸಿ ಪಕ್ಕದ ರೂಮಿನ ಕಿಟಕಿಯತ್ತ ಹೋದ. ಏನೋ ರಿಪೆರಿಗೆ ಬಂದಿರಬೇಕು. "ಅಬ್ಬಾ ಬಚಾವಾದೆ" ಎಂದು ಕೊಂಡೆ.


ಸಂಜೆ ನಾವು ಮೊದಲೆ ಬುಕ್ ಮಾಡಿದ್ದ ಹೊಟೆಲ್ ರೂಮಿಗೆ ಹೋದೆವು. ನಾವು ಒಂದು ವಾರವಾದರೂ ಹೊಟೆಲ್ ರೂಮಿನಲ್ಲಿ ಉಳಿಯುವ ಅನಿವಾರ್ಯತೆ ಇತ್ತು. ಗಣಪತಿ ಆಫೀಸಿನಿಂದ ಗುರುತಿನ ಚೀಟಿ ಸಿಕ್ಕಮೇಲಷ್ಟೇ ನಮಗೆ ಬಾಡಿಗೆಮನೆ ಸಿಗುವುದು."ಹೊಟೆಲ್ ರೂಮಿನಿಂದ ಹೊರಗಡೆ ಬರದಂತೆ ಮತ್ತು ಕಿಟಕಿಯ ಪರದೆಗಳನ್ನು ಸದಾ ಮುಚ್ಚಿಕೊಂಡಿರುವಂತೆ ನಿಮ್ಮ ಹೆಂಡತಿಗೆ ಹೇಳಿಬಿಡಿ. ಅಪಾರ್ಟಮೆಂಟ್ ಗಳಷ್ಟು ಭದ್ರತೆ ಇಲ್ಲಿರುವುದಿಲ್ಲ"ಎಂದು ಆಫೀಸಿನ ಸಹೋದ್ಯೂಗಿಗಳು ಹೇಳಿದ್ದರಿಂದ ಕಿಟಕಿಯ ಕರ್ಟನ್ ಮುಚ್ಚಿಕೊಂಡೆ ಇದ್ದೆ. ಒಳಗಡೆ ಕತ್ತಲಾಗುವದರಿಂದ ಲೈಟ್ ಹಾಕಿಕೊಂಡೆ ಇರಬೇಕಾಗಿತ್ತು. ಇದರಿಂದ ಹಗಲ್ಯಾವುದು ರಾತ್ರಿ ಯಾವುದು ಎಂದು ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ.ನಮ್ಮ ದೇಹ ಈ ಹಗಲು ರಾತ್ರಿ ವ್ಯತ್ಯಾಸವನ್ನು ಹೊಂದಿಕೊಳ್ಳಲು ೧೫ ದಿನವಾದರೂ ಬೇಕು.ಇದಕ್ಕೆ "ಜೆಟ್-ಲಾಗ್"ಎನ್ನುತ್ತಾರೆ. ಭಾರತದಲ್ಲಿ ಹಗಲಾದಾಗ ಅಮೇರಿಕದಲ್ಲಿ ರಾತ್ರಿ. ಭಾರತದ ರಾತ್ರಿಯ ಸಮಯದಲ್ಲಿ ಎಂದರೆ ಅಮೇರಿಕದ ಹಗಲು ಸಮಯದಲ್ಲಿ ನಮಗೆ ತುಂಬಾ ನಿದ್ರೆ. ಅಮೇರಿಕದ ರಾತ್ರಿಸಮಯದಲ್ಲಿ ನಮಗೆ ನಿದ್ರೆಯೆ ಬರುವುದಿಲ್ಲ ಎಕೆಂದರೆ ಭಾರತದಲ್ಲಿ ನಮಗೆ ಆಗ ಹಗಲು. ಇದೇ ರೀತಿ ಹಸಿವೂ ಕೂಡ. ಇಲ್ಲಿನ ಮಧ್ಯರಾತ್ರಿ ಸಮಯದಲ್ಲಿ ನಮಗೆ ತುಂಬಾ ಹಸಿವು. ಹಗಲಿನಲ್ಲಿ ಹಸಿವೇ ಆಗುವುದಿಲ್ಲ ಏಕೆಂದರೆ ಭಾರತದಲ್ಲಿ ಈಗ ಮಧ್ಯರಾತ್ರಿ. ನಮಗೆ ಸರಿಯಾಗಿ ಹೊಂದಿಕೊಳ್ಳಲು ಮೂರು ನಾಲ್ಕು ತಿಂಗಳುಗಳೇ ಬೇಕಾಯಿತು. ಈ ಹೊಂದಾಣಿಕೆ ಕಷ್ಟವಾಗಿತ್ತು;ಜೊತೆಗೆ ೨೪ ತಾಸುಗಳು ಲೈಟ್ ಹಾಕಿಕೊಂಡೆ ಇರಬೇಕಾದ ಕತ್ತಲೆ ಕೋಣೆಯಲ್ಲಿ! ಜೈಲಿನ ಅನುಭವವಾಗುತ್ತಿತ್ತು.ಟಿ.ವಿಯಲ್ಲಿ ನೋಡಬಾರದಂತಹ ಕಾರ್ಯಕ್ರಮಗಳೇ ಜಾಸ್ತಿ. ಅಮೃತ್-ಅಧಿತಿಯವರೊಂದಿಗೆ ವಾಲ್-ಮಾರ್ಟ್ ಗೆ ಹೋಗಿ ಬೇಕಾದ ಸಾಮಾನುಗಳನ್ನೆಲ್ಲ ತಂದುಕೊಂಡಿದ್ದೆವು. (ಅಮೃತ್ ಗಣಪತಿಯ ಕಿರಿಯ ಸಹೋದ್ಯೋಗಿ ೬ತಿಂಗಳು ಅವಧಿಗೆಂದು ನಮಗಿಂತ ಒಂದು ತಿಂಗಳು ಮೊದಲು ಬಂದಿದ್ದ. ದೆಹಲಿಯವನು) ಮರುದಿನವೇ ಒಂದು ಇನ್-ಫೋಸಿಸ್ ಪಾರ್ಟಿಇತ್ತು. ಮೂರುತಿಂಗಳಿಗೊಮ್ಮೆ ಇನ್-ಫೋಸಿಸ್ ಸಹೋದ್ಯೋಗಿಗಳೆಲ್ಲ ಸೇರುವ ಪಾರ್ಟಿ ಇದು.ನಾನು ಪಾರ್ಟಿಗೆ ಹೋಗುತ್ತಿರುವುದು ಇದೇ ಮೊದಲು;ಅದು "ಅಮೇರಿಕದಲ್ಲಿ ಪಾರ್ಟಿ" ಯಾವ ಡ್ರೆಸ್ ಹಾಕಬೇಕೆಂದೆ ಗೊತ್ತಿಲ್ಲ. ಜೊತೆಗೆ ಇಂಗ್ಲಿಷ್. ಇಲ್ಲಿಯವರೆಗೆ ಇಂಗ್ಲಿಷನ್ನು ಒಂದು ವಿಷಯವಾಗಿ ಓದಿ ಪರೀಕ್ಷೆಗೆ ಬರೆದಿದ್ದೆ ಹೊರತು ಭಾಷೆಯಾಗಿ ಮಾತಾಡಿದ್ದೆ ಇಲ್ಲ.



ಮನೆ:ಅಂತೂ ಒಂದು ವಾರವಾದಮೇಲೆ ಮನೆಗೆ ಹೊರಟೆವು. ಅಮೃತ್-ಅಧಿತಿ ಅವರಿರುವ ಅಪಾರ್ಟಮೆಂಟ್ ದಲ್ಲಿ ಮನೆ ಸಿಕ್ಕಿತ್ತು. ಗಣಪತಿಗೂ ಅವನೊಂದಿಗೆ ಕಾರಿನಲ್ಲಿ ಆಫೀಸಿಗೆ ಹೋಗಿಬರಲು ಅನೂಕೂಲವಾಗಿತ್ತು. ಇದೊಂದು ದೊಡ್ಡ ಅಪಾರ್ಟಮೆಂಟ್ ಇಲ್ಲಿ ಸುಮಾರು ೨೦೦ ಪ್ಲಾಟ್(ಮನೆ)ಗಳಿವೆ. ಒಂದೊಂದು ಕಟ್ಟಡದಲ್ಲೂ ೧೨ಮನೆಗಳು. ಸುತ್ತಲೂ ಸುಂದರವಾದ ಗಾರ್ಡನ್, ಹಸಿರು ಹುಲ್ಲನ್ನು ಬೆಳೆಸಲಾಗಿತ್ತು. ಈಜಾಡಲು ಒಂದು ಈಜುಕೊಳ ಮತ್ತು ಒಂದು ಜಿಮ್(ವ್ಯಾಯಾಮ ಶಾಲೆ)ಇತ್ತು. ಮನೆಯನ್ನು ಮೊದಲನೇಸಲ ನೋಡಿದಾಗ ಇಷ್ಟು ಸುಂದರವಾಗಿರೊ ಮನೆಯಲ್ಲಿ ನಾನಿನ್ನು ಇರ್ತಿನಲ್ಲಾ ಎಂದು ತುಂಬ ಖುಷಿಯಾಯಿತು. ನಾವಿದ್ದಿದ್ದು ಸಿಂಗಲ್ ಬೆಡ್ ರೂಂ ಮನೆ ಅದರೂ ವಿಶಾಲವಾಗಿತ್ತು. ಅಡಿಗೆ ಮಾಡಲು ಗ್ಯಾಸ್ ಬದಲೂ ಕರೆಂಟ್ ಒಲೆ ಇತ್ತು. ಜೊತೆಗೆ ಓವೆನ್, ಫ್ರಿಜ್, ಮೈಕ್ರೊ ಒವೆನ್ ಪಾತ್ರೆ ತೊಳೆಯಲೂ ಡಿಶ್ ವಾಷರ್ ಇತ್ತು. ವಾಷಿಂಗ್ ಮಿಷನ್ ಮತ್ತು ಡ್ರೈಯರ್ ಇಡಲು ಇನ್ನೊಂದು ಚಿಕ್ಕದಾದ ರೂಮಿತ್ತು.ಮಲಗುವ ರೂಮಿನಲ್ಲಿ ಕಪಾಟುಗಳು ಇರುವುದಿಲ್ಲ ಬದಲು ಬಟ್ಟೆ ಇಡಲೆಂದೆ ಇನ್ನೊಂದು ಚಿಕ್ಕ ರೂಮಿತ್ತು(ಕ್ಲೊಸೆಟ್). ಅಡಿಗೆಮನೆ,ಬಚ್ಚಲುಮನೆ ಬಿಟ್ಟು ಮತ್ತೆಲ್ಲಕಡೆ ಉಲ್ಲನ್ನಿನ ಕಾರ್ಪೆಟ್ ಹಾಸಿದೆ. ಇದನ್ನು ವಾರಕ್ಕೊಮ್ಮೆ ವ್ಯಾಕ್ಯೂಮ್ ಕ್ಲೀನರ್(ಕಸಗುಡಿಸುವ ಮಷೀನ್)ಇಂದ ಕ್ಲೀನ್ ಮಾಡಬೇಕು. ಅಡಿಗೆಮನೆಯಲ್ಲಿ ನೆಲಕ್ಕೆ ಪ್ಲೈವುಡ್ ಹಾಕಿದ್ದರಿಂದ ನೀರುಚೆಲ್ಲುವಹಾಗಿರಲಿಲ್ಲ. ಇಲ್ಲಿಯ ಮನೆಗಳು ನೋಡಲು ತುಂಬಾ ಸುಂದರ.ಮನೆಯ ಗೋಡೆಗಳು ಮಾಡು ಎಲ್ಲವೂ ಮರದಿಂದಲೇ ಮಾಡಿರುತ್ತಾರೆ. ಮನೆಯಲ್ಲಿ ಸ್ವಲ್ಪ ಒಡಾಡಿದರೂ ಕೆಳಗಿನ ಮನೆಯವರಿಗೆ ತುಂಬಾ ಸದ್ದು ಕೇಳುತ್ತದೆ. ಅಂತದರಲ್ಲಿ ಸಿಂಧೂರ ಕುಣಿದು ಕುಪ್ಪಳಿಸುತ್ತಿದ್ದ.ಅವರೆನಾದರೂ ದೂರು ಕೊಟ್ಟರೆ ನಾವು ಮನೆ ಬದಲಾಯಿಸಬೇಕಾಗುತ್ತದೆ. ಬಾತರೂಮಿನಲ್ಲಿ ಕಮೊಡ್ ತರದ ಟಾಯ್ಲೆಟ್ ಬಾತ್-ಟಬ್ ಮತ್ತು ಹಲ್ಲುಜ್ಜಲು ಒಂದು ಸಿಂಕ್. ಇದರ ಹೊರತಾಗಿ ಕೆಳಗಡೆ ಸ್ವಲ್ಪವೂ ನೀರು ಚೆಲ್ಲುವಹಾಗಿಲ್ಲ. ನನಗೆ ಕಿರಿಕಿರಿ ಹುಟ್ಟಿಸಿದ್ದು ಇಲ್ಲಿನ ಫೈಯರ್ ಅಲಾರಾಮ್. ಎಲ್ಲ ಮನೆಯ ಎಲ್ಲ ಕೋಣೆಗಳಲ್ಲೂ ಇದು ಇದ್ದೆ ಇರುತ್ತದೆ. ಹೊಟೆಲ್ ರೂಮಿನಲ್ಲಿರುವಾಗ ಕುಕ್ಕನಲ್ಲಿ ಅಕ್ಕಿ ಇಟ್ಟ ಎರಡೆ ನಿಮಿಷಕ್ಕೆ ಇದು ಕೂಗತೊಡಗಿತ್ತು.(ಎಲ್ಲಹೊಟೆಲ್ ರೂಂಗಳಲ್ಲಿ ನಾವೇ ಅಡಿಗೆ ಮಾಡಿಕೊಳ್ಳಲು ವ್ಯವಸ್ಥೆ ಇರುತ್ತದೆ) ಭಯವಾಗಿ ಒಲೆ ಆರಿಸಿದೆ. ಎರಡು ನಿಮಿಷಗಳನಂತರ ತಾನಾಗಿ ಸುಮ್ಮನಾಯಿತು. ನೋಡಿದರೆ ಓಲೆಯ ಕೆಳಗಡೆ ಎರಡು ಅನ್ನದಗುಳು ಬಿದ್ದಿತ್ತು. ಒಲೆ ಹತ್ತಿಸಿದಾಗ ಅದು ಸುಟ್ಟು ಹೊಗೆ ಬಂದಿತ್ತು. ಆದ್ದರಿಂದ ಫೈರ್ ಅಲಾರಾಮ್ ಕೂಗತೊಡಗಿತ್ತು. ಇಲ್ಲಿ ಮನೆ ಒಳಗಡೆ ಸಲ್ಪ ಹೊಗೆ ಅಥವಾ ಬೆಂಕಿ ಬಿದ್ದರೂ ಅದು ಕೂಗುತ್ತದೆ. ಅದ್ದರಿಂದ ದೇವರಿಗೆ ದೀಪ ಹಚ್ಚುವಂತಿರಲಿಲ್ಲ. ಅಲಾರಾಮ್ ಎಂಟು ಸಾರಿ ಕೂಗಿದರೆ ಮನೆಯ ಗೋಡೆಗಳಲ್ಲಿ ಅಳವಡಿಸಲಾಗಿರುವ ಸಣ್ಣ ಸಣ್ಣ ನೀರು ಪೈಪುಗಳು ಬಿಚ್ಚಿಕೊಂಡು ಮನೆಯಲ್ಲಿ ನೀರು ತುಂಬುತ್ತದಂತೆ.


ಇಲ್ಲಿ ಆರು ತಿಂಗಳು ಬೇಸಿಗೆ ಕಾಲ ಆರು ತಿಂಗಳು ಚಳಿಗಾಲ. ಮಳೆಗಾಲವೆಂದು ಇಲ್ಲವೆ ಇಲ್ಲ. ವರ್ಷದ ಎಲ್ಲಾ ಕಾಲಗಳಲ್ಲೂ ೬-೮ದಿನಕ್ಕೊಮ್ಮೆ ಮಳೆ ಬರುತ್ತದೆ. ಚಳಿಕಾಲದಲ್ಲಿ ಸಂಜೆ ೫.೩೦ಕ್ಕೆ ಕತ್ತಲಾದರೆ ಬೇಸಿಗೆಯಲ್ಲಿ ೯ಗಂಟೆಗೆ ಕತ್ತಲಾಗುತ್ತದೆ. ಈಗ ಬೇಸಿಗೆ ಕಾಲವಾಗಿದ್ದರಿಂದ ೯ಗಂಟೆಗೆ ಕತ್ತಲಾಗುತ್ತಿತ್ತು.ರಾತ್ರಿಯ ಊಟ ಮಾಡುವಾಗಲೂ ಹೊರಗಡೆ ಬಿಸಿಲಿರುತ್ತಿತ್ತು. ಮನೆಯ ಹತ್ತಿರದಲ್ಲಿ ಪಾರ್ಕಿತ್ತು. ಆರಾಮವಾಗಿ ಊಟವನ್ನು ಮುಗಿಸಿಕೊಂಡು ಪಾರ್ಕಿಗೆ ಹೋಗುತ್ತಿದೆವು.ತುಂಬಾ ಜನ ಭಾರತೀಯರು ಪಾರ್ಕಿಗೆ ಬರುತ್ತಿದ್ದರು. ಕೆಲವರು ನಮ್ಮಂತೆ ೧-೨ವರ್ಷಕ್ಕೆಂದು ಬಂದವರಾದರೆ ಇನ್ನು ಕೆಲವರು ೨೫-೩೦ ವರ್ಷಗಳಿಂದ ಇಲ್ಲೆ ನೆಲೆಸಿ ಇಲ್ಲಿನ ಪ್ರಜೆಗಳು ಎನ್ನಿಸಿಕೊಂಡವರು. ಅವರನ್ನು ನೋಡಿದಾಗ "ಅಮೇರಿಕಾ ಅಮೇರಿಕಾ" ಸಿನಿಮಾದ"ಯಾವ ಮೋಹನ ಮುರಳಿ ಕರೆಯಿತೋ ದೂರತೀರಕೆ ನಿನ್ನನು"ಹಾಡು ನೆನಪಾಗೋದು.


ಕಾರು: ಅಮೇರಿಕಾ ಹೇಗಿದೆ ಎಂದು ನಾನು ವಿಮಾನಿನಿಂದ ಕೆಳಗಡೆ ನೋಡಿದಾಗ ನನಗೆ ಮೊದಲು ಕಂಡದ್ದು ಸಾಲಾಗಿ ನಿಲ್ಲಿಸಿಟ್ಟಿರುವ ಕಾರುಗಳು. ಇದೇನು ಕಾರ್ ಷೋನಾ? ಯಾಕೆ ಇಷ್ಟೊಂದು ಕಾರ್ ನಿಲ್ಲಿಸಿಟ್ಟಿದ್ದಾರೆ ಎಂದುಕೊಂಡಿದ್ದೆ ಆಗ. ಆಮೇಲೆ ನೋಡಿದರೆ ಎಲ್ಲ ಕಡೆಯೂ ಹಾಗೆ. ರೋಡಿನಲ್ಲೂ ಕಾರುಗಳನ್ನು ಬಿಟ್ಟು ಬೇರೆ ವಾಹನಗಳು ಕಾಣುವುದೇ ಇಲ್ಲ."ಬೆಂಗಳೂರಿನಲ್ಲಿರುವಾಗ ಒಂದು ಇಂಗ್ಲಿಷ್ ಹಾಡು ನೋಡಿದ್ದೆ. ಅದರಲ್ಲಿ ನಾನು ಎಷ್ಟು ಬಡವ ಎಂದರೆ ನನ್ನ ಬಳಿ ಒಂದು ಕಾರು ಇಲ್ಲ ಎಂದು ಆ ಗಾಯಕ ಹಾಡುತ್ತಿದ್ದ. ಕಾರಿಲ್ಲದಿದ್ದರೆ ಬಡವನಾ? ಎಂದು ಆಗ ನಗು ಬಂದಿತ್ತು. ಅದರೆ ಅದು ಎಷ್ಟು ನಿಜ ಎಂದು ಈಗ ಗೊತ್ತಾಕ್ತಾ ಇದೆ."ಎಂದು ಗಣಪತಿ ಆಗಾಗ ಹೇಳುತ್ತಿದ್ದ. ಕಾರು ಇಲ್ಲಿ ಅವಶ್ಯಕ ವಸ್ತುಗಳಲ್ಲಿ ಒಂದು. ಉಳಿಯಲು ಮನೆ ಎಷ್ಟು ಮುಖ್ಯವೋ ಕಾರು ಅಷ್ಟೇ ಮುಖ್ಯ.ಇಲ್ಲಿ ಸಾರ್ವಜನಿಕ ಸಂಚಾರಿ ವ್ಯವಸ್ಥೆಗಳು ಇಲ್ಲವೆ ಇಲ್ಲ.ಬಸ್ಸುಗಳು ಹ್ಯೂಸ್ಟನ್ ಸಿಟಿಯ ಮುಖ್ಯ ಭಾಗಗಳಲ್ಲಿ ಮಾತ್ರ ಇತ್ತು. ನಾವಿರುವುದು "ಸ್ಟ್ಯಾಫರ್ಡ್" ಎನ್ನುವ ಊರು. ಇದು ಮುಖ್ಯ ಸಿಟಿಯಿಂದ ಸ್ವಲ್ಪ ಹೊರಗೆ. ಇಲ್ಲಿ ಕಿಲೊಮೀಟರ್ ಬದಲು ಮೈಲುಗಳನ್ನು ಬಳಸುತ್ತಾರೆ.(ಇದುವರೆಗೂ ಮೈಲು ಎಂದರೆ ಹಳೆಯ ಕನ್ನಡ ಶಬ್ದವೆಂದು ತಿಳಿದುಕೊಂಡಿದ್ದೆ.) ಎಲ್ಲರೂ ಇಲ್ಲಿ ಕಾರ್ ಗಳಲ್ಲಿ ಓಡಾಡುವದು, ಯಾರಾದರೂ ಹೊರಗಡೆ ನಡೆದಾಡುತ್ತಿದ್ದಾರೆ ಎಂದರೇ ಅವರು ಭಾರತೀಯರೇ ಆಗಿರುತ್ತಾರೆ. ಸಂಜೆ ತಂಪುಹೊತ್ತಿನಲ್ಲಿ ಕೂಡ ಯಾರೂ ವಾಕ್ ಮಾಡುವದಿಲ್ಲ. ಬೇಕಿದ್ದರೇ ಪಾರ್ಕ್ ಅಥವಾ ಜಿಮ್ ಗಳಲ್ಲಿ ಕಾಣಸಿಗುತ್ತಾರೆ. ಹೊರಗಡೆ ರಸ್ತೆಯನ್ನು ನೋಡುತ್ತಾ ಕುಳಿತರೆ ದಿನಕ್ಕೆ ಒಂದೊ-ಎರಡೋ ಬೈಕ್ ಕಾಣಿಸುತ್ತದೆ ಅಷ್ಟೇ.ಮತ್ತೆಲ್ಲಾ ಕಾರುಗಳೆ, ತರತರದ ಕಾರುಗಳು. "ಕಾರ್ ಕಾರ್ ಕಾರ್ ಎಲ್ನೋಡಿ ಕಾರ್" ವೀಕ್ ಎಂಡ್ ಗಳಲ್ಲಿಹೊರಗಡೆ ಹೋಗೊಣವೆಂದರೆ ಕಾರಿರಲಿಲ್ಲ. ಹತ್ತಿರದಲ್ಲೆಲ್ಲೂ ಅಂಗಡಿಗಳೆ ಇರಲಿಲ್ಲ. ನಮ್ಮ ಅಗತ್ಯ ವಸ್ತುಗಳನ್ನು ತರಲೂ ಸ್ನೇಹಿತರ ಸಹಾಯ ಕೇಳಬೇಕಾಗುತ್ತಿತ್ತು. ಇದು ನಮಗೆ ಮುಜುಗರವಾಗುತ್ತಿತ್ತು. ನಮ್ಮ ಮನೆಯಿಂದ ೨ಕೀ.ಮಿ ದೂರದಲ್ಲಿ ಕೆಲವು ಶಾಪಿಂಗ್ ಮಾಲ್ ಗಳಿದ್ದವು. ಒಂದು ದಿನ ನಡೆದೇ ಹೋದೆವು. ಕಾರಿನಲ್ಲಿ ಹೋಗುತ್ತಿದ್ದವರೆಲ್ಲಾ ನಮ್ಮನ್ನೇ ನೋಡುತ್ತಾ ಹೋಗುತ್ತಿದ್ದಾರೆನೋ ಅನ್ನಿಸಿ ಮುಜುಗುರವಾಯಿತು.


ಇಲ್ಲಿನ ಬೆಲೆ;ಒಂದು ಡಾಲರ್ ಅಂದರೆ ಈಗ ಭಾರತದಲ್ಲಿನ ೪೮ರೂಪಾಯಿಗೆ ಸಮ. ೫-೪ ರೂಪಾಯಿಗಳು ಹೆಚ್ಚು ಕಡಿಮೆಯಾಗುತ್ತಿರುತ್ತವೆ. ಪ್ರತಿ ವಸ್ತುಗಳನ್ನು ಕೊಳ್ಳುವಾಗಲೂ ಮನಸ್ಸಿನಲ್ಲಿ ಡಾಲರನ್ನು ರೂಪಾಯಿಗೆ ಗುಣಿಸಿನೋಡುವದು ಅಭ್ಯಾಸ. "ನೀನು ಬಿಡು ನಾವು ಬಂದು ಹತ್ತುವರ್ಷ ಆದ್ರೂ ಇನ್ನೂ ಬಿಟ್ಟಿಲ್ಲ" ಎಂದು ಕೆಲವರು ಹೇಳಿದ್ದಿದೆ. ಒಂದು ಡಾಲರ್=೪೮ ರೂಪಾಯಿ. ೧ಎಲ್-ಬಿ=೪೫೪ ಗ್ರಾಂ ಇಲ್ಲಿ ಕೆ.ಜಿಗಳ ಬದಲು ಇದನ್ನೆ ಬಳಸುತ್ತಾರೆ. ಗ್ಯಾಲನ್=೩.೭೮೫ ಲೀಟರ್. ಅಕ್ಕಿ ೧ಕೆಜಿಗೆ ೧೨೫ರಿಂದ ೨೦೦ರೂಗಳು ಬೇಳೆ " ೩೦೦-೪೦೦ " ಗೋಧಿ ಹಿಟ್ಟು ಕೆಜಿಗೆ ೯೦-೧೪೦ ಎಣ್ಣೆ ಲೀಟರ್ ೩೫೦ರೂ ಬೆಂಡೆಕಾಯಿ ಬದನೆಕಾಯಿ ಕೆಜಿಗೆ ೩೦೦-೪೦೦ರೂ ಈರುಳ್ಳಿ ಕೆ.ಜಿ=೨೨೫-೨೭೫ ಹಾಲು ಲೀಟರಿಗೆ೬೦-೮೦ ರೂ ಮೊಸರು ೧೫೦ರೂ ಇಂತಹ ವಸ್ತುಗಳನ್ನು ಕೊಳ್ಳಲೂ ಭಾರತ ಅಂಗಡಿಗಳು(ದೇಸಿ ಸ್ಟೋರ್)ಗಳನ್ನೇ ಹುಡುಕಿ ಹೋಗಬೇಕು.ಇತರ ಮಾಮೂಲಿ ವಸ್ತುಗಳಾದ, ಉಪ್ಪು ಸಕ್ಕರೆ ಸೋಪು ಪೇಸ್ಟು, ಬಟ್ಟೆ ಇಂತವು ಇಲ್ಲಿನ ಅಂಗಡಿಗಳಲ್ಲೇ ಸಿಗುತ್ತದೆ. (ವಾಲ್-ಮಾರ್ಟ್ ) ಮಾಮೂಲಿ ತರಕಾರಿಗಳಾದ ಕ್ಯಾರೆಟ್, ಟೊಮೆಟೊ ಕುತ್ತುಂಬರಿ ಸೊಪ್ಪು, ಕ್ಯಾಬಿಜ್, ಹೂಕೊಸು, ಕೆಂಪು ಮೂಲಂಗಿ ಗಿಡ ಸಹಿತ ಬಿಟರೂಟ್, ಲಿಂಬೆ ಹಣ್ಣು ಬೆಂಡೆಕಾಯಿ ಸವತೆಕಾಯಿ, ಈರುಳ್ಳಿ, ಬಟಾಟೆ ಗೆಣಸು ಹಣ್ಣುಗಳಾದ ಸೇಬು, ಕಲ್ಲಂಗಡಿ, ಮೂಸುಂಬೆ ಮಾವಿನಹಣ್ಣು, ಬಾಳೆ ಪಪ್ಪಯ ದ್ರಾಕ್ಷಿ ಇಂತವು ಇಲ್ಲಿನ ಅಂಗಡಿಗಳಲ್ಲಿ ಸಿಗುತ್ತವೆ. ಆದ್ರೇ ತರಕಾರಿ ಮತ್ತು ಹಣ್ಣುಗಳ ರುಚಿ ಸ್ವಲ್ಪ ಬೇರೆ. ಇಲ್ಲಿನ ತರಕಾರಿಗೂ ಅಲ್ಲಿನ ತರಕಾರಿಗೂ ಬಹಳಷ್ಟು ವ್ಯತ್ಯಾಸ. ಸಾಮಾನ್ಯವಾಗಿ ಎಲ್ಲ ತರಕಾರಿ ಹಣ್ಣುಗಳ ಬೆಲೆಯೂ ಅಷ್ಟೆ೩೦೦-೪೦೦ರೂಪಾಯಿಗಳು. ಈ ರಾಜ್ಯ; ಈ ರಾಜ್ಯದ ಹೆಸರು ಟೆಕ್ಸಾಸ್. ನಮ್ಮ ಭಾರತ ದೇಶದ ಅರ್ಧದಷ್ಟಿದೆ. ಇದು ಅಮೇರಿಕದ ದಕ್ಷಿಣಭಾಗದಲ್ಲಿದೆ. ಮೊದಲೊಂದು ಕಾಲದಲ್ಲಿ ಮರಭೂಮಿ ಆಗಿತ್ತೆಂದರೆ ನಂಬಲು ಸಾಧ್ಯವಿಲ್ಲ.ಮೆಕ್ಸಿಕನ್ನರ ಜೊತೆ ಯುದ್ಧ ಮಾಡಿ ಗೆದ್ದದ್ದು. ಆದರೆ ಅಮೇರಿಕದಲ್ಲಿ ಇದು ಅತ್ಯಂತ ಬಡರಾಜ್ಯ. ಇಲ್ಲಿ ತೆರಿಗೆ-ಬೆಲೆ-ವೇತನ ಎಲ್ಲವೂ ಕಡಿಮೆ ಎಂದು ಹೇಳುತ್ತಾರೆ. ಈರಾಜ್ಯ ಬುಷ್ ಅವನ ಹುಟ್ಟೂರು. ಇಲ್ಲಿ ದನಗಾಹಿಗಳು (ಕವ್ ಬಾಯ್)ಜಾಸ್ತಿ ಇದ್ದರಂತೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಚಳಿ ಕಡಿಮೆ. ಆದರೂ ಚಳಿಗಾಲದಲ್ಲಿ ನವೆಂಬರ್ ನಿಂದ ಫೆಬ್ರವರಿತನಕ ಸರಿಸುಮಾರಾಗಿ ೦-೧೦ಸೆಂಟಿಗ್ರೆಡ್ ಆಗಿರುತ್ತದೆ. ಬೆಸಿಗೆಯಲ್ಲಿ ಇದರ ವಿರುದ್ದ. ತಾಳಿಕೊಳ್ಳಲಾರದಷ್ಟು ಸೆಖೆ.೪೦-೫೦ಸೆಂಟಿಗ್ರೆಡ್. ಮಳೆಗಾಲ ಎಂಬುದು ಇಲ್ಲವೆ ಇಲ್ಲ. ಮಳೆ ಯಾವಾಗ ಬೇಕಾದ್ರೂ ಬರಬಹುದು.


ಇಲ್ಲಿನ ಜನರು; ಇಲ್ಲಿ ಬಿಳಿಯರು ಕರಿಯರು,ಮೆಕ್ಸಿಕನ್ನರು ಎಲ್ಲರೂ ಇದ್ದಾರೆ. ನಮ್ಮಂತೆ ಬಂದ ಭಾರತೀಯರು, ಚೀನಿಯರು ಪಾಕಿಸ್ತಾನಿಗಳು ಎಲ್ಲರೂ ಇದ್ದಾರೆ. ಇಲ್ಲಿನ ಬಿಳಿಯರದ್ದು ಮಾಮೂಲಿ ಪ್ಯಾಂಟ್ ಶರ್ಟ್. ಹುಡುಗಿಯರೂ ಅಷ್ಟೇ ತಲೆಯ ಮೇಲೊಂದು ಜುಟ್ಟು ಇಲ್ಲವಾದರೆ ಬಾಬ್ ಕಟ್. ಕರಿಯರನ್ನು ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ. ೬-೭ಫೂಟ್ ಎತ್ತರ.೨೦೦-೩೦೦ಕೆಜಿ ದಪ್ಪ ಇರಬಹುದೆನೋ ಅವರ ಎದುರಿಗೆ ನಿಂತರೆ ನಾನು ಚಿಕ್ಕ ಮಕ್ಕಳ ಸೈಜು. ಅವರ ಹೇರ್ ಸ್ಟೈಲುಗಳಂತೂ ಚಿತ್ರ-ವಿಚಿತ್ರ. ಹುಡುಗಿಯರಿಗೆ ನಾವು ಎರಡು ಜಡೆ ಹಾಕುವಂತೆ ೬-೮ ಜಡೆ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರಂತೂ ತಲೆಯಲ್ಲಿ ಸುಮಾರು ೨೦೦-೩೦೦ ಚಿಕ್ಕ ಚಿಕ್ಕ ಜಡೆ ಹಣೆದು ಅದನ್ನೆಲ್ಲಾ ಸೇರಿಸಿ ಇನ್ನೊಂದು ಜುಟ್ಟು. ಇದನ್ನು ಗಂಡು ಹೆಣ್ಣು ಎಂಬ ಭೇದವಿಲ್ಲದೇ ಯಾರದ್ರೂ ಹಾಕಿಕೊಳ್ಳಬಹುದು. ಇಲ್ಲಿ ಹಜಾಮನ ಬೆಲೆ ೨೦೦-೮೦೦ರೂಗಳು. ಇಲ್ಲೂ ಮೊದಲೇ ಅಪಾಯಂಟ್-ಮೆಂಟ್ ತಗೊಬೇಕು. "ಇವತ್ತು ಟೆಕ್ನೀಶಿಯನ್ ಇಲ್ಲ ನಾಳೆ ಬನ್ನಿ ಎಂದು ನಮ್ಮ ಪರಿಚಯದವರೊಬ್ಬರನ್ನು ಒಂದು ದಿನ ಹಾಗೆ ವಾಪಸ್ ಕಳಿಸಿದ್ದರು. "ನಮ್ಮಕಡೆ ಏನೂ ಕೆಲಸ ಬರಲ್ಲಾಂದ್ರೆ ಹೋಗಿ ಹಜಾಮತಿ ಮಾಡು ಅಂತೀವಿ ಅವರನ್ನು ಮುಟ್ಟಿಸಿಕೊಳ್ಳಲ್ಲ. ಇಲ್ಲಿ ಅವರಿಗೆ ಟೆಕ್ನೀಶಿಯನ್ ಅಂತಾರೆ " ಎಂದು ಅವರ ಹೆಂಡತಿ ಮತ್ತು ನಾನು ನಕ್ಕಿದ್ದೆವು. ಅದರೆ ಇಲ್ಲಿ ಹಜಾಮತಿ ಮಾಡಲೂ ಪರೀಕ್ಷೆ ಪಾಸಾಗಬೇಕು. ಇಲ್ಲಿನ ಬಿಳಿಯರು ಸಭ್ಯರು. ಇವರಲ್ಲಿ ಆರೋಗ್ಯ ಪ್ರಜ್ನೆಯೂ ಬಹಳ. ಇಲ್ಲಿ ಬೊಜ್ಜು ಬೆಳೆಸಿಕೊಳ್ಳುವವರು ಇದ್ದಾರೆ, ಪ್ರತಿದಿನ ವಾಕಿಂಗ್, ತಿನ್ನಲು ಲಿಮಿಟ್ ಇಟ್ಟಿಕೊಂಡವರೂ ಇದ್ದಾರೆ. ಇಲ್ಲಿ ಮದುವೆಯ ವಯಸ್ಸು ಸರಾಸರಿ ೪೦ ವರ್ಷ. ಬಹಳ ತಡ, ಹಾಗಂತ ಅಲ್ಲಿಯವರೆಗೆ ಒಬ್ಬರೇ ಬದುಕುತ್ತಾರೆ ಎಂದಲ್ಲ. ಸಾಮಾನ್ಯವಾಗಿ ಬಾಯ್ ಫ್ರೆಂಡ್-ಗೆರ್ಲ್ ಫ್ರೆಂಡ್ ಹೊಂದಿರುತ್ತಾರೆ.ವೀಕ್ ಎಂಡ್ ನಲ್ಲಿ ಬೇಟಿ ಮಾತುಕತೆ ಎಲ್ಲ. ತಿರುಗಿ ಅವರವರ ಮನೆಗೆ ಅವರವರು. ಸ್ವತಂತ್ರವಾದ ಬದುಕು.೪೦ ವರ್ಷದ ನಂತರ ಒಟ್ಟಿಗೆ ಬದುಕು,ಮದುವೆ ಮಕ್ಕಳು ಎಲ್ಲ. ಸಾಮಾನ್ಯವಾಗಿ ೨-೩ ಮಕ್ಕಳಿರುತ್ತಾರೆ. ೬ತಿಂಗಳು ಮಗುವಿನಿಂದಲೇ ಮಕ್ಕಳನ್ನು ಬೇರೆ ರೂಮಿನಲ್ಲಿ ಮಲಗಿಸುತ್ತಾರೆ. ಅಲ್ಲಿಂದಲೇ ಅವರಿಗೆ ಒಬ್ಬರೇ ಬದುಕಲು ಕಲಿಸುವುದು.೮-೧೦ ತಿಂಗಳು ಮಗುವನ್ನು ನೀರಿಗಿಳಿಸಿ ಈಜು ಕಲಿಸುತ್ತಾರೆ. ೨ವರ್ಷದ ಮಗು ಸರಾಸರಿ ಈಜತೊಡಗುತ್ತದೆ.


ಜೂನ್೨೩ ಬಂದ ಶುರುವಿನಲ್ಲಿ ಇಲ್ಲಿ ಹೊಂದಿಕೊಳ್ಳುವುದು ಕಷ್ಟ ಎನಿಸುತ್ತಿತ್ತು. ಇಲ್ಲಿನ ವತಾವರಣ, ಮನೆ,ಜನರು ಯಾವುದು ನನ್ನದಲ್ಲ. ವಾಪಸ ಬೆಂಗಳೂರಿಗೆ ಹೋಗಿಬಿಡುವ ಅನ್ನಿಸುತ್ತಿತ್ತು.ಇಲ್ಲಿ ಬಂದತಕ್ಷಣ ವಿಮಾ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವೈದ್ಯಕೀಯ ವೆಚ್ಛ ಭರಿಸುವುದು ಕಷ್ಟ.. ಬಂದ ಶುರುವಿನಲ್ಲೆ ನನಗೆ ಅಸ್ವಸ್ಥತೆ-ಡಾಕ್ಟರ್ ಬಳಿ ಹೋಗಲು ಇನ್ಸುರೆನ್ಸ್ ಆಗಿರಲಿಲ್ಲ.ಆಗ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಲ್ಲಿನ ಡಾಕ್ಟರಗಳೂ ಮಕ್ಕಳಿಗಂತೂ ಮೆಡಿಸಿನ್ ಕೊಡುವುದು ತುಂಬಾ ಕಡಿಮೆ. ಜ್ವರ,ಬೇಧಿ ಎನೇ ಬಂದರೂ ಆಹಾರದಲ್ಲೆ ಹಿಡಿತಕ್ಕೆ ತನ್ನಿ ಎನ್ನುತ್ತಾರೆಯೆ ಹೊರತು ಮೆಡಿಸಿನ್ ಕೊಡುವುದಿಲ್ಲ. ೪ವರ್ಷದೊಳಗಿನ ಮಕ್ಕಳಿಗೆ ಮೆಡಿಸಿನ್ ಕೊಡುವಂತೆಯೇ ಇಲ್ಲ ಎಂದು ಯಾರೋ ಹೇಳಿದರು.




ಇಲ್ಲಿಗೆ ಬಂದು ಎರಡು ತಿಂಗಳು ಕಳೆದಿತ್ತು. ಈಗ ಸಾಕಷ್ಟು ಹೊಂದಿಕೊಂಡಿದ್ದೆವು. ಸಿಂಧೂರನಿಗೂ ಬೆಂಗಳೂರು ಈಗ ಅಷ್ಟಾಗಿ ಕಾಡುತ್ತಿರಲಿಲ್ಲ. ೨-೩ ಭಾರತೀಯ ಕುಟುಂಬಗಳ ಪರಿಚಯವಾಗಿತ್ತು. ಆದ್ದರಿಂದ ಸಿಂಧೂರನಿಗೂ ಆಡಲು ಗೆಳೆಯರು ಸಿಕ್ಕಿದ್ದರು. ಕೆಲವುಸಲ ವೇದಾಂತಿಗಳ ಮಾತು ನೆನಪಾಗುತ್ತಿತ್ತು. ಮನುಷ್ಯ ಸಾಯುವಾಗ ಆತ್ಮ ಒಂದೇ ಹೋಗುವುದು, ಅವನು ಕೂಡಿಟ್ಟು ಎನು ಪ್ರಯೋಜನ,ಎಲ್ಲವನ್ನು ಇಲ್ಲೆ ಬಿಟ್ಟು ಹೋಗಬೇಕು. ಇಲ್ಲೂ ಕೂಡ ಅದೇ ತರಹ ವಿಮಾನದಲ್ಲಿ ಒಪ್ಪಿಗೆ ಇರುವುದು ಒಬ್ಬೊಬ್ಬರಿಗೆ ಎರೆಡೆರಡು ಬ್ಯಾಗುಗಳು ಮಾತ್ರ. ಕಾರು,ಆಟಿಕೆ ಸಾಮಾನು ಟಿ.ವಿ ನಾವು ಎನೇ ತೆಗೆದು ಕೊಳ್ಳಲಿ ಹೋಗುವಾಗ ಇಲ್ಲೆ ಕಸದಬುಟ್ಟಿಗೆ ಇಟ್ಟು ಹೋಗಬೇಕು. ಇಲ್ಲಿನ ಸ್ನೇಹಿತರಲ್ಲಿ ಕೇಲವರು ಈಗಾಗಲೇ ಭಾರತಕ್ಕೆ ವಾಪಸ್ ಹೋಗಿದ್ದರು."ನಿಮಗೆ ಬೇಕಾಗಿದ್ದನ್ನು ತೆಗೆದುಕೊಳ್ಳಿ"ಎಂದು ಟಿ.ವಿ,ಸೋಫಾ, ಪಾತ್ರೆ ಮಿಕ್ಸರ್, ವ್ಯಾಕ್ಯೂಮ್ ಕ್ಲೀನರ್, ರಗ್ ಹಾಸಿಗೆ ಹೀಗೆ ಎಲ್ಲವನ್ನು ಕೊಟ್ಟು ಹೋದರು. ಇಲ್ಲಿ ಕಸವನ್ನು ಹಾಕಲು ದೊಡ್ಡ ಪೆಟ್ಟಿಗೆಯನ್ನೆ ಮಾಡಿಟ್ಟಿರುತ್ತಾರೆ. ಪ್ರತೀ ದಿನ ಬೆಳಿಗ್ಗೆ ಒಂದು ಟ್ಯಾಕ್ಟರ್ ಬಂದು ಕಸವನ್ನು ಒಯ್ಯುತ್ತದೆ. ಒಂದು ದಿನ ಕಸ ಇಡಲು ಹೋದಾಗ ಅಲ್ಲೊಂದು ಚಿಕ್ಕ ಮಕ್ಕಳು ಕೂರುವಂತಹ ಕುರ್ಚಿಯ ತರದ ಸೀಟ್ ಕಂಡೆ. ಚೆನ್ನಾಗಿದೆ ಮನೆಗೆ ಎತ್ತುಕೊಂಡು ಹೋಗಲಾ ಅನಿಸ್ತು. ಛೀ! ಯಾರೋ ಇಟ್ಟ ಕಸ ಎಂದು ಹಾಗೆ ಬಂದೆ. ಅದ್ರೆ ಕಸದ ಬುಟ್ಟಿಗೆ ಹಾಕದೇ ಪಕ್ಕದಲ್ಲಿಟ್ಟಿದ್ದರು. ಆಮೇಲೆ ಗೊತ್ತಾಯ್ತು ಅದು ಮಕ್ಕಳ ಕಾರ್ ಸೀಟ್. ಮಕ್ಕಳನ್ನು ಇಲ್ಲಿ ಮಡಿಲಲ್ಲಿ ಕೂರಿಸಿಕೊಳ್ಳುವಂತಿಲ್ಲ ಎಂದು ಗೊತ್ತಿತ್ತು. ಆದ್ರೆ ಮಕ್ಕಳನ್ನು ಕಾರ್ ಸೀಟ್ ನಲ್ಲಿಯೇ ಕೂರಿಸಬೇಕೆಂದು ಗೊತ್ತಿರಲಿಲ್ಲ. ಮಕ್ಕಳನ್ನು ಕಾರಿನ ಮುಂದುಗಡೆ ಕೂರಿಸುವಂತಿಲ್ಲ. ಹಿಂದುಗಡೆ ಸೀಟ್ ನಲ್ಲಿಯೇ ಆಯಾ ವಯಸ್ಸಿಗೆ ತಕ್ಕ ಸೈಜಿನ ಕಾರ್ ಸೀಟ್ ಮೇಲೆ ಕೂರಿಸಬೇಕು. "ಅಲ್ಲೊಂದು ಕಾರ್ ಸೀಟ್ ಇತ್ತು ಕಣ್ರಿ" ಎಂದು ನಂದಿತಾಗೆ ಹೇಳಿದಾಗ(ನಂದಿತಾ ಕನ್ನಡದ ಗೆಳತಿ) "ಅಯ್ಯೊ ನೀವು ಎತ್ತಿಕೊಂಡು ಬರಬೇಕಿತ್ತು ಕಣ್ರಿ ನೀವು ಕಾರ್ ತಗೊಂಡು ಬಂದಮೇಲೆ ಸಿಂಧೂರನಿಗೆ ಆಗಿರೂದು. ಇಲ್ಲೇಲ್ಲಾ ಹಾಗೆ ಅಂತೆ, ತಮಗೆ ಬೇಡಾ ಅನ್ನಿಸಿದ ವಸ್ತುನ ಕಸದ ಪೆಟ್ಟಿಗೆ ಹತ್ತಿರ ಇಟ್ಟು ಹೋಗ್ತಾರಂತೆ ಯಾರು ಬೇಕಾದ್ರೂ ತಗೊಬಹುದಂತೆ. ನಮ್ಮನೆಯಲ್ಲಿರುವ ಟೇಬಲ್, ಕುರ್ಚಿ ಹಾಗೆ ತಂದಿದ್ದು."ಅವಳೆಂದಳು. ಅವರ ಮನೆಯಲ್ಲಿರುವ ಟೇಬಲ್, ತಿರುಗುವ ಕುರ್ಚಿ ತುಂಬಾ ಚೆನ್ನಾಗಿತ್ತು, ಎನಿಲ್ಲವೆಂದರೂ ೪-೫ ಸಾವಿರ ಬೆಲೆ ಬಾಳುವಂತಿತ್ತು. ನನಗೆ ಒಂದು ಕ್ಷಣ ನಮಗೂ ಚಿಂದಿ ಆಯುವವರಿಗೂ ಎನು ವ್ಯತ್ಯಾಸ ಎನಿಸಿ ಪಿಚ್ ಎನಿಸಿತು. ಮರುಕ್ಷಣವೇ ಅಂದುಕೊಂಡೆ, ನಾನು ನಾಳೆ ಭಾರತಕ್ಕೆ ತಿರುಗಿ ಹೋಗುವಾಗ ನನ್ನ ಮಿಕ್ಸಿ, ವ್ಯಾಕ್ಯುಮ್ ಕ್ಲೀನರ ಸಿಂಧೂರನ ಸೈಕಲ್, ಕಾರ್ ಹೀಗೆ ಎಲ್ಲವನ್ನೂ ಅಲ್ಲೆ ಇಟ್ಟು ಹೋಗಬೇಕು. ಯಾರೂ ಬಳಸದೇ ಕಸವಾಗುವ ಬದಲು ಇನ್ಯಾರೊ ತೆಗೆದುಕೊಂಡು ಹೋಗಿ ಬಳಸಿದರೆ ನನಗೂ ಖುಷಿಯಲ್ಲವೆ. ಹಾಗಾಗಿ ಇದು ತಪ್ಪಲ್ಲ ಎನ್ನಿಸಿತು. ಈ ಕಸದ ಬುಟ್ಟಿಯಲ್ಲಿ ಎಷ್ಟೋ ಸಾರಿ ಟಿ.ವಿ ವ್ಯಾಕ್ಯೂಮ್ ಕ್ಲೀನರ್, ಸೋಫ, ಕುರ್ಚಿ, ಹಾಸಿಗೆ ಮಂಚ ಮುಂತಾದವನ್ನು ಕಂಡಿದ್ದೇನೆ. ನಾವು ಅಷ್ಟೇ ಯಾರೋ ಭಾರತಕ್ಕೆ ವಾಪಸ್ ಹೋಗುವವರಿದ್ದರು, ಅವರಿಂದ ಟೇಬಲ್ ಕುರ್ಚಿ ಕೆಲವು ಪಾತ್ರೆಗಳನ್ನು ಕೊಂಡೆವು.



ಕಾಡಿದ ಪರಕೀಯತೆ; ಗಣಪತಿ ಕಾರ್ ಡ್ರೈವಿಂಗ್ ಕ್ಲಾಸಿಗೆ ಹೋಗಿ ಕಾರ್ ಕಲಿಯತೊಡಗಿದ್ದ. ಯಾವಾಗ ಲೈಸೆನ್ಸ ಸಿಕ್ಕಿ ಕಾರ್ ತೆಗೆದುಕೊಳ್ಳುತ್ತೆವೋ ಅನಿಸಿತ್ತು ನನಗೆ. ಬೇರೆಯವರು ಯಾವಾಗ ಯಲ್ಲಿಗೆ ಹೋಗ್ತಾರೆ ಎನ್ನೊದನ್ನೆ ಕಾಯುತ್ತ ಇರಬೇಕು. ನಿಮ್ಮ ಜೊತೆ ನಾವು ಬರ್ತೀವಿ ಎಂದು ಹಲ್ಲು ಗಿಂಜಿ ಕೇಳಬೇಕು. ಎಲ್ಲಿಗಾದ್ರೂ ಹೋಗೊದಾದ್ರೆ ಬಾಡಿಗೆ ಕಾರ್(ಯಲ್ಲೊ ಕ್ಯಾಬ್)ಮಾಡಿಸಿಕೊಂಡು ಹೋಗಬಹುದು ಆದ್ರೆ ನಮ್ಮ ಶಾಪಿಂಗ್ ಮುಗಿಯುವ ತನಕ ಅವರನ್ನು ನಿಲ್ಲಿಸಿಕೊಳ್ಳಲು ತುಂಬಾ ದುಬಾರಿ.(ನಿಮಿಷಕ್ಕೆ ೫೦ರೂಪಾಯಿ ಕೊಡಬೇಕು) ನಮಗೆ ಕನಿಷ್ಠ ಒಂದು ತಾಸದರೂ ಬೇಕು. ಹಾಗಾಗಿ ಹೋಗುವಾಗ ಕ್ಯಾಬ್ ನವರು ಬಿಟ್ಟು ಹೋದರೆ, ನಮ್ಮ ಶಾಪಿಂಗ್ ಮುಗಿದಮೇಲೆ ಇನ್ನೊಂದು ಕ್ಯಾಬಿಗೆ ಫೋನ್ ಮಾಡಬೇಕು. ಫೋನ್ ಮಾಡಿ ಐದೇ ನಿಮಿಷದ ಒಳಗೆ ಅವರು ಹಾಜರಿರುತ್ತಾರೆ. ಆದರೆ ನಮ್ಮ ಬಳಿ ಮೊಬೈಲ್ ಇರಲಿಲ್ಲ. ಆದರಿಲ್ಲಿಪಬ್ಲಿಕ್ ಟೆಲಿಫೋನುಗಳು ಇರುವುದೇ ಇಲ್ಲ. ಹಾಗಾಗಿ ಕ್ಯಾಬಿಗೆ ಫೋನ್ ಮಾಡಲೆಂದೇ ಮೊಬೈಲ್ ತೆಗೆದುಕೊಂಡೆವು. ಹಾಗೆ ಪರಿಚಯವಾದವನೇ ಅಬ್ದುಲ್. ಟ್ಯಾಕ್ಸಿ ಚಾಲಕ. ತುಂಬಾಸಲ ಅವನ ಕ್ಯಾಬಿನಲ್ಲಿ ಹೋಗಿರುವುದರಿಂದ ಪರಿಚಯವಾಗಿತ್ತು.ದಾರಿತುಂಬಾ ಎನಾದ್ರೂ ಮಾತನಾಡುತ್ತಾ ಹೋಗುತ್ತಿದ್ದ."ನೀವು ಎಷ್ಟು ದಿನಕ್ಕೆ ಅಂತ ಬಂದಿರೋದು" ಆತ ಕೇಳಿದ. "ಒಂದು ವರ್ಷಕ್ಕೆಂದು ಬಂದಿದ್ದೇವೆ." ಗಣಪತಿ ಹೇಳಿದ. "ಒಂದು ವರ್ಷ ಆದಮೇಲೆ ವಾಪಸ್ ಹೋಕ್ತಿರಾ?"ಕೇಳಿದ. "ಹೂಂ ಹೋಕ್ತಿವಿ" "ನಿಜವಾಗ್ಲೂ ಹೋಕ್ತಿರಾ?" ಮತ್ತೆ ಕೇಳಿದ. ಯಾಕೆಂದ್ರೆ ಅವನು ಕೂಡ ಅಮೇರಿಕದವನಲ್ಲ. ಟರ್ಕಿ ದೇಶದವನು. ಬಂದು ಮೂವತೈದು ವರ್ಷಗಳೇ ಕಳೆದಿವೆ. ಮಕ್ಕಳು ದೊಡ್ಡವರಾಗಿದ್ದಾರೆ. ಪ್ರತೀವರ್ಷವೂ ವಾಪಸ್ ಹೋಗಿಬಿಡಬೇಕೆಂದು ಅಂದುಕೊಳ್ಳುತ್ತಾನಂತೆ, ಆದ್ರೆ ಆಗ್ತಾ ಇಲ್ಲ. ಆದ್ರೆ ಈ ಸಾರಿ ಹೋಗಲೇ ಬೇಕೆಂದು ತೀರ್ಮಾನಿಸಿದ್ದಾನಂತೆ."ಯಾಕೆ ಮಕ್ಕಳೆಲ್ಲಾ ಇಲ್ಲೆ ದೊಡ್ಡವರಾಗಿದ್ದಾರೆಂದರೆ ಇಲ್ಲೆ ಇದ್ದು ಬಿಡಿ." ಎಂದು ನಾವು ಹೇಳಿದ್ದಕ್ಕೆ "ಇಲ್ಲ ೩೫ ವರ್ಷಗಳು ಕಳೆದರೂ ಅಮೇರಿಕಕ್ಕೆ ಹೊಂದಿಕೊಳ್ಳಲು ನನ್ನಿಂದ ಸಾಧ್ಯ ಆಕ್ತಾ ಇಲ್ಲ. ಇನ್ನೂ ಕೂಡ ಪರಕೀಯತೆ ಕಾಡುತ್ತಾ ಇದೆ. ಅದಕ್ಕೆ ವಾಪಸ್ ಹೋಕ್ತೀನಿ." ಎಂದು ಹೇಳಿದ. ಆಗ ನನಗೆ ಪ್ಯಾಂಟ್ ಶರ್ಟ್ ಹಾಕಿಕೊಂಡು ಕಾಲು ಕುಂಟುತ್ತಾ ಪಾರ್ಕಿನಲ್ಲಿ ಸುತ್ತುತ್ತಿರುವ ಭಾರತೀಯರು ನೆನೆಪಾದರು. ಅವರೆಲ್ಲ ಅಮೇರಿಕಕ್ಕೆ ಬಂದು ೩೦-೩೫ ವರ್ಷಗಳೇ ಆಗಿರಬಹುದು. ಆದರೇ ಅವರ್ಯಾರಿಗೂ ಈ ಪರಕೀಯತೆ ಕಾಡಲೇ ಇಲ್ವಾ? ಅಥವಾ ಅಲ್ಲಿಗೆ ಹೋಗಲಾರದ ಇಲ್ಲಿರಲಾರದ ಪರಿಸ್ಥಿತಿಯಾ ಗೊತ್ತಿಲ್ಲ? "ಎಷ್ಟು ದಿನಕ್ಕೆ ಅಂತ ಇಲ್ಲಿಗೆ ಬಂದಿದಿರ?" ಇದು ಯಾರೇ ಹೊಸ ಭಾರತೀಯನೊಬ್ಬ ನಮಗೆ ಸಿಕ್ಕಾಗ ಕೇಳುವ ಮೊದಲಪ್ರಶ್ನೆ. "ಒಂದು ವರ್ಷಕ್ಕೆ" "ನಿಜವಾಗ್ಲೂ ಒಂದು ವರ್ಷದಮೆಲೆ ವಾಪಸ್ ಹೋಗ್ತಿರಾ? ಯಾಕೆ ಅಮೇರಿಕ ಇಷ್ಟವಾಗ್ಲಿಲ್ವ?" ಇದು ಎರಡನೆ ಪ್ರಶ್ನೆ. ಯಾಕೆಂದ್ರೆ ಇಂತಹ ಪ್ರಶ್ನೆ ಕೇಳಿದವರೆಲ್ಲರೂ ಬಹುಷಃ ಒಂದು ವರ್ಷಕ್ಕೆಂದೇ ಬಂದವರಾಗಿರಬೇಕು ಆದರೆ ಕಳೆದ ೨೫-೩೦ ವರ್ಷಗಳಿಂದ ಇಲ್ಲೆ ಇದ್ದಾರೆ ಪಾಪ. ಅಮೇರಿಕಾ ಚೆನ್ನಾಗಿದೆ ಎಂದಾಕ್ಷಣ ನಮ್ಮ ದೇಶ, ನಮ್ಮ ಜನರು ಎಲ್ಲವನ್ನೂ ಬಿಟ್ಟು ಇಲ್ಲೆ ಇರೋದಕ್ಕಾಗತ್ತಾ? "(ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ) ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಹೆಚ್ಚು"ಈ ಮಾತು ಯಾವತ್ತಿದ್ದರೂ ಸತ್ಯ ಅಲ್ವಾ? ಕೆಲವರಂತೂ ಭಾರಕ್ಕೆ ಹೋಗಿ ಎನ್ ಮಾಡ್ತೀರಾ ಇಲ್ಲೆ ಇದ್ದಬಿಡಿ ಎಂದು ಬಿಟ್ಟಿ ಸಲಹೆ ಕೊಟ್ಟವರೂ ಇದ್ದಾರೆ.



ಅಗಷ್ಟ ೭; ಮೊನ್ನೆ ಪಾರ್ಕಿಗೆ ಹೋಗಿದ್ದಾಗ ಒಂದು ಸಂಸಾರ ನೋಡಿ ಕೆಲಕಾಲ ಅವರ ಬಗ್ಗೆ ಯೋಚನೆ ಮಾಡುವಂತಾಯಿತು. ೬೦-೭೦ ವರ್ಷದ ದಂಪತಿಗಳು ಒಂದು ವರ್ಷದ ಮಗುವನ್ನು ಕರೆತಂದಿದ್ದರು. ಎನಪ್ಪ ಈ ವಯಸ್ಸಿನಲ್ಲಿ ಅವರಿಗೆ ಇಷ್ಟುಚಿಕ್ಕ ಮಗುನಾ? ಎಂದುಕೊಂಡೆ. ಆದರೆ ಆಮಗು ಅವರದಲ್ಲ. ಅವರ ಮೊಮ್ಮಗು. ಅಂದರೆ ಅವರ ಮಗಳ ಮಗು. ಅವರ ಮಗಳಿಗಿನ್ನೂ ೧೬-೧೭ ವಯಸ್ಸು ಅಷ್ಟೆ. ಹೈಸ್ಕೂಲ್ ಓದುತ್ತಿರಬಹುದು ಅಷ್ಟೆ. ಆಗ್ಲೇ ಮಗು. ಇಷ್ಟು ಬೇಗ ಮಕ್ಕಳಾದರೇ ಅದರ ಜವಾಬ್ದಾರಿ ಯಾರದ್ದು ನನಗೆ ಆಶ್ಚರ್ಯ.ಆದರೆ ಇಲ್ಲಿನ ಜನರಿಗೆ ಇದರಲ್ಲಿ ಏನೂ ವಿಷೇವಿಲ್ಲ, ಇದು ಸಾಮನ್ಯ. ಕಾಲೆಜ್ ಓದೊ ಹುಡುಗಿ ಮಗೂನ ಹೇಗೆ ನೊಡಿಕೊಳ್ಳುತ್ತಾಳೊ? ಮಗೂನ ಕರ್ಚು ವೆಚ್ಛ ಯಾರು ನೋಡಿಕೊಳ್ಳುತ್ತಾರೋ ಎಂದು ನಾನು ತುಂಬ ಹೊತ್ತಿನತನಕ ಯೋಚನೆ ಮಾಡುತ್ತಿದ್ದೆ.ಆಮೇಲೆ ಯಾರನ್ನೊ ಕೇಳಿದ್ದಕ್ಕೆ "ಹಾಂ ಇದು ಇಲ್ಲಿಯ ದೊಡ್ಡ ಸಮಸ್ಯೆ, ಮಕ್ಕಳಿಗೆ ೧೮ ವರ್ಷ ವಾಗೊವರೆಗೂ ತಂದೆ ತಾಯಿ ನೋಡ್ಕೊತಾರೆ, ಅಷ್ಟರಲ್ಲಿ ಮಗು ಆದ್ರೆ ಅದನ್ನೂ ತಂದೆ ತಾಯಿ ನೋಡ್ಕೊಬೇಕು" ಅಂದ್ರು.



ಅಗಸ್ಟ್ ೨೦ ಇಲ್ಲಿಗೆ ಬಂದು ನಾಲ್ಕು ತಿಂಗಳು ಕಳೆದಿತ್ತು. ಎಷ್ಟು ದಿನದಮೇಲೆ ಇಲ್ಲಿಂದ ೪೦ ಮೈಲ್ ದೂರದಲ್ಲಿ ಕುಮಟಾದ ಹವ್ಯಕರೊಬ್ಬರಿದ್ದಾರೆಂದು ಯಾರದೋ ಮೂಲಕ ತಿಳಿದಿತ್ತು. ಅವರಿಗೆ ನನ್ನ ಫೂನ್ ನಂಬರ್ ಕೊಟ್ಟೆ. ಅವರೆ ಫೋನ್ ಮಾಡಿದರು. ಕೆಲವು ದಿನಗಳಲ್ಲಿ ನಮ್ಮ ಮನೆಗೂ ಬಂದರು. ಅವರು ೧೫-೧೬ ಲಕ್ಷ ಕೊಟ್ಟು ಹೊಸ ಕಾರ್ ತೆಗೆದು ಕೊಂಡಿದ್ದರು. ಕಾರಿನಲ್ಲಿ ಏನೆಲ್ಲ ವ್ಯವಸ್ಥೆ. ಎಲ್ಲಿಗೆ ಹೋಗಬೇಕೆಂದು ಹೇಳಿದರೆ ಕಾರು ದಾರಿ ತೋರಿಸುತ್ತ ಹೋಗುತ್ತದೆ. ಕಾರಿನಲ್ಲೇ ಟಿ.ವಿ, ಕಾರಿನಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ತರದ ವಾತಾವರಣ ಮಾಡಿಕೊಳ್ಳಬಹುದು. ಛಳಿ ಬೇಕಾದವರಿಗೆ ಛಳಿ ಸೆಖೆ ಬೇಕಾದವರಿಗೆ ಸೆಖೆ ಹೀಗೆ ಎನೆನೋ ವ್ಯವಸ್ಥೆ ಕಾರಿನಲ್ಲಿತ್ತು. ಅವರ ಹಳೆಯ ಕಾರನ್ನು ನಾವು ತೆಗೆದುಕೊಂಡೆವು. ಕಾರ್ ಬಂದ ದಿನ ತುಂಬ ಖುಷಿ ಆಗಿತ್ತು. ಎಲ್ಲವೂ ಹೊಸದಾದ ನೋಡಿಲ್ಲದ ಜಾಗ. ಪ್ರತಿದಿನ ಸಂಜೆ ಒಂದೊಂದು ಹೊಸ ಶಾಪಿಂಗ್ ಮಾಲ್,ಪಾರ್ಕ್, ದೇವಸ್ಥಾನಗಳನ್ನು ಹುಡುಕಿ ಹೋಗುತ್ತಿದ್ದೆವು. ಅಮೇರಿಕದಲ್ಲಿ ನಮ್ಮ ಕಾರಿನಲ್ಲಿ ಸುತ್ತುತ್ತಿದ್ದೆವಲ್ಲ ಎಂದು ತುಂಬ ಖುಷಿ ಎನಿಸುತ್ತಿತ್ತು. ಯಾಕೆಂದ್ರೆ ಇಲ್ಲಿ ಡ್ರೈವಿಂಗ್ ಭಾರತದಂತಿಲ್ಲ. ಇಲ್ಲಿ ಎಡಗೈ ಡ್ರೈವಿಂಗ್. ಕಾರಿನ ವೇಗವೂ ಜಾಸ್ತಿ. ಸಾಮಾನ್ಯ ರಸ್ತೆಗಳಲ್ಲೂ ೬೦ಕೀ.ಮಿ ವೇಗದಲ್ಲಿ ಕಾರು ಒಡಿಸಬೇಕು. ಯಾವರೋಡಿನಲ್ಲಿ ಹೋಗಬೇಕು. ಎಲ್ಲಿ ತಿರುಗಬೇಕು ಎಂಬುದನ್ನು ಮೊದಲೇ ಇಂಟರ್-ನೆಟ್ ನಲ್ಲಿ ನೋಡಿ ಬರೆದುಕೊಂಡು ಹೋಗಬೇಕು. ಸ್ವಲ್ಪ ದಾರಿ ತಪ್ಪಿದರೂ ೩-೪ ಮೈಲು ಸುತ್ತುಹಾಕಿಕೊಂಡು ಬರಬೇಕಾಗುತ್ತದೆ. ಈ ಕಷ್ಟ ಸಾಕೆಂದು ಜಿ.ಪಿ.ಸ್ ಕೊಂಡೆವು. ಇದರಲ್ಲಿ ನಾವು ಎಲ್ಲಿಗೆ ಹೋಗಬೇಕೆಂದು ವಿಳಾಸ ಕೊಟ್ಟರೆ ಸಾಕು. ಅದು ದಾರಿ ತೋರಿಸುತ್ತಾ ಎಲ್ಲೆಲ್ಲಿ ತಿರುಗಬೇಕು. ಆ ರಸ್ತೆಯಲ್ಲಿ ಯಾವ ವೇಗದಲ್ಲಿ ಹೋಗಬಹುದು. ಎಂಬುದನ್ನು ತೋರಿಸುತ್ತಾ ಸಾಗುತ್ತದೆ.ಇವತ್ತು ಊಟಕ್ಕೆ ಉಡುಪಿ ಹೋಟೆಲಿಗೆ ಹೋಗಿದ್ದೆವು. ಉಡುಪಿ ಹೋಟೆಲ್ ಮತ್ತು ಕಾಮತ್ ಹೋಟೆಲ್ ಜಗತ್ತಿನ ಎಲ್ಲಾ ಭಾಗದಲ್ಲೂ ಇದೆಯೋ ಎನೋ.




ಚಂಡಮಾರುತ(ಹರಿಕೆನ್) ಒಂದು ದಿನ ಮಾತನಾಡುತ್ತಿದ್ದಾಗ "ಇಲ್ಲಿ ಜೂನಿನಿಂದ ನವೆಂಬರ್ ಒಳಗಡೆ ಯಾವಾಗ ಬೇಕಾದ್ರೂ ಹರಿಕೇನ್ ಬರತ್ತಂತೆ.ಅದೇನಾದ್ರೂ ಬಂದ್ರೆ ನಾವು ಮನೆ ಬಿಡಬೇಕಾಗುತ್ತಂತೆ" ಎಂದು ನಂದಿತಾ ಹೇಳಿದಳು. ಈವರೆಗೂ ನಾನು ಹರಿಕೇನ್ ಎಂಬ ಶಬ್ಧವನ್ನೇ ಕೇಳಿರಲಿಲ್ಲ. ಹಾಗೆಂದ್ರೇನು? ಎಂದು ಪೆದ್ದುಪೆದ್ದಾಗಿ ಅವಳನ್ನೇ ಕೇಳಿದೆ. "ಅಂದ್ರೆ ಚಂಡಮಾರುತ ಹೋದವರ್ಷ ಮನೆ ಬಿಡಬೇಕಾಗುತ್ತೊ ಎನೋ ಎಂದಿದ್ರಂತೆ. ಆದರೆ ಆಮೇಲೆ ಬೇಕಾಗಿಲ್ಲವಂತೆ." ಅವಳೆಂದಳು. ಅವಳ ಗಂಡ ಒಂದು ವರ್ಷ ಮೊದಲೇ ಇಲ್ಲಿಗೆ ಬಂದಿದ್ದರಿಂದ ಅವಳಿಗೆ ಎಲ್ಲವೂ ಗೊತ್ತಿತ್ತು.ಇದಾದ ಕೆಲವು ದಿನಗಳ ನಂತರ ಮತ್ತೆ ಅವಳೆ ಫೋನ್ ಮಾಡಿ "ನಾಳೆ ಗ್ಯಾಲ್ವಸ್ಟನಿಗೆ ಹರಿಕೇನ್ ಬರತ್ತಂತೆ ಆದ್ರರಿಂದ ಇಲ್ಲಿ ಜೋರಾಗಿ ಮಳೆ ಬರುತ್ತೆ ಅಂತ ನಮ್ಮ ಯಜಮಾನ್ರು ಫೋನ್ ಮಾಡಿದ್ರು, ಕುಡಿಯೊ ನೀರನ್ನೆಲ್ಲ ತುಂಬಿ ಇಟ್ಟುಕೊಳ್ಳಿ, ಕರೆಂಟ್ ಹೋದ್ರು ಹೋಗಬಹುದಂತೆ" ಹೇಳಿದಳು. ಗ್ಯಾಲ್ವಸ್ಟನ್ ಸಮುದ್ರ ದಡದಲ್ಲಿರುವ ನಗರ. ಅದಕ್ಕೆ ನೇರವಾಗಿ ಹ್ಯೂಸ್ಟನ್ ಇದೆ. ಆದ್ರರಿಂದ ಅಲ್ಲಿ ಏನಾದ್ರೂ ಚಂಡಮಾರುತ ಬಂದ್ರೆ ಅದು ಹ್ಯೂಸ್ಟನ್ನಿಗೂ ಪರಿಣಾಮ ಬೀರುತ್ತದೆ. ಇದ್ದ ಕ್ಯಾನೆಲ್ಲ ಖಾಲಿಮಾಡಿ ನೀರನ್ನು ತುಂಬಿಟ್ಟುಕೊಂಡೆವು. ಕರೆಂಟ್ ಹೋದರೆ ಅಡಿಗೆಯನ್ನೂ ಮಾಡಲಾಗುವುದಿಲ್ಲ. ಆದ್ದರಿಂದ ಒಂದಷ್ಟು ಚಪಾತಿಯೂ ರೆಡಿಯಾಯಿತು. ಆಫೀಸಿಗೂ ರಜೆ ಕೊಟ್ಟರು. ಏನೇನಾಗಬುದು ಎಂದೆಲ್ಲ ಮಾತಡಿಕೊಂಡೆವು. ಆದರೆ ಮರುದಿನ ಹಾಗೇನು ಆಗಲಿಲ್ಲ. ಒಂದು ಸಣ್ಣ ಮಳೆ ಬಂತು ಅಷ್ಟೇ. ಚಂಡಮಾರುತ ದಡಕ್ಕೆ ಬರುವ ಹೊತ್ತಿಗೆ ದುರ್ಬಲವಾಗಿತ್ತು. ಏನೆಲ್ಲ ಆಗಬಹುದು ಎಂದು ಕಾಯುತ್ತಿದ್ದ ನಮಗೆಲ್ಲರಿಗೂ ನಿರಾಸೆಯಾಗಿತ್ತು. ಇಲ್ಲಿ ಜೂನಿನಿಂದ ನವೆಂಬರ್ ವರೆಗೆ ೧೫-೨೦ ಚಂಡಮಾರುತಗಳು ಬರುತ್ತವೆ. ಇದಕ್ಕೆ ಒಂದೊಂದು ಹೆಸರಿಟ್ಟು ಕರೆಯುತ್ತಾರೆ. ಇದು ಅಟ್ಲಾಂಟಿಕ್ ಸಾಗರದಲ್ಲೆಲ್ಲೊ ಹುಟ್ಟುತ್ತದೆ. ಇದಾದ ಕೆಲವು ದಿನಗಳ ನಂತರ ಮತ್ತೆ ಇನ್ನೊಂದು ಚಂಡಮಾರುತ ಎದ್ದಿತ್ತು. ಅದು ಕ್ಯೂಬಾ ಪ್ರವೇಶಿಸಿತ್ತು. ಈ ಚಂಡಮಾರುತದ ಹೆಸರು"ಗುಸ್ತಾವ". ಕ್ಯೂಬಾದಿಂದ ಮೇಲ್ಗಡೆ ಯಾವ ದಿಕ್ಕಿಗೆ ತಿರುಗುತ್ತದೆಂದು ನಮಗೆಲ್ಲರಿಗೂ ಕೂತೂಹಲ. ಪ್ರತೀದಿನ ಟಿ.ವಿಯಲ್ಲಿ ನೋಡುವುದೇ ಕೆಲಸ. ಆದರೆ ಇದು ನಾವಿರುವ ಪಕ್ಕದ ರಾಜ್ಯದಕಡೆ ತಿರುಗಿತ್ತು. ಅಲ್ಲಿನ ೨ಲಕ್ಷ ಜನರು ಮನೆ ಖಾಲಿಮಾಡಿದ್ದರು. ಈ ಹರಿಕೇನ್ ಮೂರನೇ ಹಂತದ್ದೆಂದು ಹವಾಮಾನ ತಜ್ನರು ಲೆಕ್ಕಹಾಕಿದ್ದರು. ಆದರೆ ದಡ ಸೇರುವ ಹೊತ್ತಿಗೆ ಇದು ಒಂದನೆ ಹಂತಕ್ಕೆ ಬದಲಾಗಿ ದುರ್ಬಲವಾಗಿತ್ತು. ಅದ್ದರಿಂದ ಯಾರಿಗೂ ಎನೂ ಆಗಲಿಲ್ಲ. ಚಂಡಮಾರುತವೆಂದಕೂಡಲೇ ಎಷ್ಟನೇ ಹಂತವೆಂದು ಮೊದಲು ಕೇಳುತ್ತಾರೆ. ಒಂದನೆ ಹಂತವಾದರೆ ಯಾರಿಗೂ ಅಪಾಯವಿಲ್ಲ. ಜೋರಾಗಿ ಗಾಳಿಮಳೆ ಆಗುತ್ತದಷ್ಟೆ. ಎರಡನೇ ಹಂತವಾದರೆ ಗಾಳಿಯವೇಗ ೧೫೫-೧೭೮ಕೀ.ಮಿ ಮೂರನೇ ಹಂತವಾದರೆ ಗಾಳಿಯವೇಗ ೧೭೯-೨೧೦ಕೀ.ಮಿ. ನಾಲ್ಕನೇ ಹಂತದಲ್ಲಿ ಗಾಳಿಯ ವೇಗ ೨೧೧-೨೫೦. ಇದಕ್ಕೂ ಹೆಚ್ಚಿನದೆಲ್ಲ ಐದನೇ ಹಂತ. ಎರಡನೇ ಹಂತ ಮತ್ತು ಅದಕ್ಕೊ ಹೆಚ್ಚಿನದೆಲ್ಲ ಅಪಾಯಕಾರಿ. ಅಲ್ಲಿಂದ ಮನೆ ಖಾಲಿ ಮಾಡಲೇ ಬೇಕು. ಸೆಪ್ಟೆಂಬರ್ ಮೊದಲವಾರದಲ್ಲಿ ಒಂದುದಿನ ನಿಷಾ ಫೋನ್ ಮಾಡಿ ಈ ವೀಕ್ ಎಂಡಿಗೆ ಹರಿಕೇನ್ ಬರುತ್ತದಂತೆ, ಅದೂ ಹ್ಯೂಸ್ಟನ್ನಿಗೆ ಬರುತ್ತದಂತೆ ಎಂದಳು. ಗುಸ್ತಾವ ಮುಗಿದಮೇಲೆ ಅಟ್ಲಾಂಟಿಕ್ ಸಾಗರದಲ್ಲಿ ಮೂರು ಚಂಡಮಾರುತಗಳು ಒಟ್ಟಿಗೆ ಎದ್ದಿದ್ದವು. ಹಾನ, ಐಕಿ ಮತ್ತು ಜೊಸಫೀನ್. ಹಾನ ಉತ್ತರ ಅಮೇರಿಕದ ಕಡೆ ಎಲ್ಲೊ ಹೋಗಿತ್ತು. ಜೊಸಫೀನ್ ಅಷ್ಟೇನು ಜೋರಿರಲಿಲ್ಲ, ಅದೂ ಮೆಕ್ಸಿಕೊದ ಕಡೆ ಸುತ್ತು ಹಾಕುತ್ತಿತ್ತು. ಐಕಿ ದೂರದಲ್ಲೆಲ್ಲೊ ಇದೆ ಎಂದು ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಮತ್ತೊಮ್ಮೆ ಹವಾಮಾನ ವರದಿಯನ್ನು ನೋಡಿದೆ. ಐಕಿ ಚಂಡ ಮಾರುತ ಕ್ಯೂಬಾದ ಬಳಿ ಬಂದಿತ್ತು. ಅದು ಮೇಲ್ಗಡೆ ಬರಲು ೪-೫ ದಿನಗಳಾದರೂ ಬೇಕು. ನಮಗೆಲ್ಲರಿಗೂ ಒಂದುಸಾರಿ ಹರಿಕೇನ್ ನೋಡಬೇಕೆಂದು ಆಸೆಯಾಗಿತ್ತು. ಆದರಿಂದ ನಾವಿದ್ದಲ್ಲಿಗೆ ಬರೆಲೆಂದು ಆಶಿಸಿದ್ದೆವು. ಅದು ಕ್ಯೂಬಾದಿಂದ ಮೆಕ್ಸಿಕೊಕಡೆ ವಾಲಿತ್ತು. ಆದರೆ ನಿಧಾನಕ್ಕೆ ಅದರ ದಿಕ್ಕು ಬದಲಾಗಿ ನಾವಿರುವಕಡೆಗೆ ತಿರುಗತೊಡಗಿತ್ತು. ನಮಗೆಲ್ಲ ಎನೋ ಸಡಗರ. "ಅದು ಬಂದ್ರೆ ಏನಾಗುತ್ತೆ ಗೊತ್ತಾ?" ಎಂದು ಎಲ್ಲರು ಗಂಡಂದಿರಿಂದ ಬೈಸಿಕೊಂಡಿದ್ದೆವು. ಈಗ ಸ್ಪಷ್ಟವಾಗಿ ಅದರ ದಿಕ್ಕು ಹ್ಯೂಸ್ಟನ್ ಕಡೆಗಿತ್ತು. ಮೂರುದಿನಬಿಟ್ಟು ಅದು ನಾವಿರುವಲ್ಲಿಗೆ ಹೊಡೆಯುವದಿತ್ತು. ಮೊದಲನೇ ದಿನದಿಂದಲೇ ರಜೆ ಕೊಡಲಾಗಿತ್ತು. ಎಲ್ಲಿ ಹೋದರೂ ಅದೇ ಸುದ್ದಿ. ಆ ಸಮಯದಲ್ಲಿ ಏನೇನು ಮಾಡಬೇಕು, ಏನೆನು ಮಾಡಬಾರದು ಎಂದು ಮಾಹಿತಿ ಕೊಟ್ಟಿದ್ದರು. ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನವರೆಗೆ ಈ ಚಂಡ ಮಾರುತ ಬಡಿಯುವದಿತ್ತು. ಹಾಗಾಗಿ ಆಸಮಯದಲ್ಲಿ ಕರ್ಫ್ಯೊ ಘೋಷಿಸಲಾಗಿತ್ತು. ನಾವೆಲ್ಲ ಗುರುವಾರವೇ ಚಪಾತಿಗಳನ್ನು ಮಾಡಿಟ್ಟೆವು. ನೀರನ್ನೆಲ್ಲ ತುಂಬಿಟ್ಟುಕೊಂಡೆವು ಏಕೆಂದರೆ ಕರೆಂಟ್ ಇಲ್ಲದಿದ್ದರೆ ಇಲ್ಲಿ ಎನೂ ಇಲ್ಲ. ಸಮುದ್ರತೀರದ ಜನರನ್ನು ಮನೆ ಖಾಲಿ ಮಾಡಿಸಲಾಗಿತ್ತು. ನಾವಿರುವಲ್ಲಿ ಮನೆ ಬಿಟ್ಟುಹೋಗುವ ಅವಶ್ಯಕತೆ ಏನೂ ಇರಲಿಲ್ಲ. ಆದರೆ ಒಂದು ಸೊಳ್ಳೆಯೂ ಒಳಹೋಗದಂತೆ ಬಿಗಿಯಾಗಿ ಕಿಟಕಿ, ಬಾಗಿಲುಗಳನ್ನು ಹಾಕಿಕೊಳ್ಳಬೇಕು. ಆಸಮಯದಲ್ಲಿ ಬಾಗಿಲು, ಕಿಟಕಿ ಎನಾದರೂ ತೆಗೆದರೆ ಗಾಳಿ ಒಳನುಗ್ಗುವ ರಭಸಕ್ಕೆ ಮನೆಯೆ ಹಾರಿಹೋಗುತ್ತದಂತೆ. ನಾವು ಕಾಯುತ್ತಿರುವ ಆದಿನ ಬಂದೆ ಬಿಟ್ಟಿತು. ಆದರೆ ಶುಕ್ರವಾರ ಮಧ್ಯಾಹ್ನದವರೆಗೂ ಪ್ರತಿದಿನದಂತೆ ಇತ್ತು. ನನಗಂತೂ ಎನೂ ಆಗೋದಿಲ್ವೆನೊ ಅಂತ ನಿರಾಸೆ. ಆದರೆ ಸಂಜೆ ಐದು ಗಂಟೆ ಆಗುತ್ತಿದ್ದಂತೆ ನಿಧಾನಕ್ಕೆ ಗಾಳಿ ಜೋರಾಗತೊಡಗಿತು. ಆರುಗಂಟೆಯ ಹೊತ್ತಿಗೆ ಮನೆಯಿಂದ ಹೊರಹೋಗಿ ಒಂದು ಸುತ್ತು ಒಡಾಡಿಕೊಂಡು ಬಂದೆ. ಗಾಳಿಯ ರಭಸಕ್ಕೆ ಒಣ ಎಲೆಗಳೆಲ್ಲ ಓಡುತ್ತಿದ್ದವು. ನಮ್ಮನ್ನು ಯಾರೋ ನೂಕಿದಂತಾಗುತ್ತಿತ್ತು. ಚಂಡಮಾರುತದೊಂದಿಗೆ ಸುಂಟರಗಾಳಿಯೂ ಬರಬಹುದು ಎಂದು ಹವಾಮಾನ ವರದಿ ಹೇಳತೊಡಗಿತ್ತು. ತುಂಬಾ ಜೋರಾಗಲಿದೆ ಎಂದು ಇಲ್ಲಿನ ಅನುಭವಸ್ಥರೂ ಹೇಳಿದರು. ಸಮುದ್ರದ ರಭಸಕ್ಕೆ ನೀರು ಉಕ್ಕಿ ಬಂದು ಸಾವಿರಾರು ಮನೆಗಳು ಜಲಾವೃತಗೊಂಡಿತ್ತು. ನಾನು ಹತ್ತು ಗಂಟೆಯವರೆಗೂ ಬಾಲ್ಕನಿಗೆ ಹೋಗಿ ಗಾಳಿ ಎಷ್ಟಿದೆ ಎಂದು ನೋಡಿ ಬರುತ್ತಿದ್ದೆ. ಈಗ ಗಾಳಿಯ ವೇಗ ಇನ್ನೂ ಜಾಸ್ತಿ ಆಗಿತ್ತು. ನಮ್ಮನ್ನು ನೂಕುತ್ತಿತ್ತು. ರಾತ್ರಿಯಾಗಿದ್ದರಿಂದ ನಾನು ಮಲಗಿಕೊಂಡೆ. ಗಣಪತಿ ಭಯದಿಂದ ಮಲಗಲೆ ಇಲ್ಲ, ಹವಾಮಾನ ವರದಿ ನೋಡುತ್ತ ಕುಳಿತಿದ್ದ. ೧೨.೩೦ರ ಸುಮಾರಿಗೆ ಎದ್ದು ಮತ್ತೆ ನೋಡಿದರೆ ಗಾಳಿಯ ರಭಸಕ್ಕೆ ಮರಗಳೆಲ್ಲ ಬಾಗಿ ನೆಲಮುಟ್ಟುತ್ತಿದ್ದವು. ೪.೩೦ರ ಸುಮಾರಿಗೆ "ಈಗ ನೋಡು ಬಾ ಚಂಡಮಾರುತನ" ಎಂದು ಎಬ್ಬಿಸಿದಾಗ ಕಿಟಕಿಯ ಬಳಿ ಬಂದುನಿಂತೆ. ಈಗ ಗಾಳಿಯ ರಭಸ ಇನ್ನೂ ಜೋರಾಗಿತ್ತು. ಗಾಳಿಯ ಸಪ್ಪಳ ಎಂತವರನ್ನೂ ಭಯಬೀಳಿಸುವಂತಿತ್ತು. ಮನೆಯನ್ನೇ ಹಾರಿಸಿಕೊಂಡು ಹೋಗಬಹುದೆಂಬ ಭಯ ಶುರುವಾಯಿತು. ಮರಗಳಂತು ಗಾಳಿಯ ವೇಗಕ್ಕೆ ನೆಲವನ್ನೆ ಮುಟ್ಟುತ್ತಿದ್ದವು. ಇಂತಹ ಭಯಾನಕ ಪ್ರ್‍ಅಕೃತಿ ವಿಕೋಪವನ್ನು ನನ್ನ ಕಣ್ಣುಗಳಿಂದಲೇ ನಂಬಲಾಗುತ್ತಿರಲಿಲ್ಲ. ಅಷ್ಟು ಹೂತ್ತಿಗೆ ತಟ್ ಅಂತ ಕರೆಂಟ್ ಹೋಗಿ ಕತ್ತಲಾವರಿಸಿಕೊಂಡಿತು. ಹೋರಗಡೆಯಿಂದ ಭೀಕರ ಸಪ್ಪಳಮಾತ್ರ ಕೇಳುತ್ತಿತ್ತು. ಮತ್ತೆ ಮಲಗಿಕೊಂಡೆ. ಶನಿವಾರ ಬೆಳಗಿನಿಂದ ಶುರುವಾಯಿತು ಪರದಾಟ, ಕರೆಂಟ್ ಇಲ್ಲದಿದ್ದದೆ ಇಲ್ಲಿ ಜೀವನವೇ ಇಲ್ಲ. ಮೊದಲೆ ಮಾಡಿಟ್ಟುಕೊಂಡ ಚಪಾತಿಯನ್ನೇ ತಿನ್ನುವಂತಾಯಿತು. ಸ್ನಾನಕ್ಕೆ ಬಿಸಿನೀರಿಲ್ಲ. ಕರೆಂಟ್ ಇಲ್ಲದಿದ್ದರೆ ಅಡಿಗೆ ಒಲೆಯೂ ಇಲ್ಲ. ಫೋನ್ ಇಲ್ಲ. ಟಿ.ವಿಯೂ ಇಲ್ಲ. ಫ್ರಿಜ್ ನಲ್ಲಿದ್ದ ತರಕಾರಿ ಹಾಲು ಮೊಸರು ಎಲ್ಲ ಹಾಳಾಗಿದ್ದವು. ಅಂಗಡಿಗಳೆಲ್ಲ ಒಂದು ವಾರದವರೆಗೆ ತೆಗೆಯುವ ಸೂಚನೆಯೂ ಇರಲಿಲ್ಲ. ಎಲ್ಲಿ ನೋಡಿದರೂ ಮರ ಮುರಿದು ಬಿದ್ದಿದ್ದವು.ಇನ್ನು ಅಳಿದುಳಿದ ಮರಗಳು ಎಲ್ಲ ಎಲೆಗಳು ಉದುರಿ ಬೊಳಾಗಿ ಪ್ರ್‍ಅಕೃತಿಯ ಆಟಕ್ಕೆ ಬೆದರಿ ಸುಸ್ತಾಗಿ ನಿಂತಿದ್ದವು. ರೋಡಿನಲ್ಲಿ ಸಿಗ್ನಲ್ ಲೈಟುಗಳು ನೇತಾಡ ತೊಡಗಿದ್ದವು. ದಾರಿ ಹೇಳುವ ಬೋರ್ಡ್ ಗಳೆಲ್ಲ ಮಲಗಿಬಿಟ್ಟಿದ್ದವು. ಸಿಗ್ನಲ್ ಗಳಲ್ಲಿ ಯಾರು ಮೊದಲು ಹೋಗಬೇಕೆಂದು ತಿಳಿಯದೆ ಹಲವು ಅಪಘಾತಗಳು ನಡೆದವು. ಎರಡು ದಿನವಾದರೂ ಕರೆಂಟ್ ಬರಲೇ ಇಲ್ಲ. ನಾವು ಮಾಡಿಟ್ಟುಕೊಂಡ ಚಪಾತಿಗಳೆಲ್ಲ ಹಳಸಿತ್ತು. ಸೆಖೆಗೆ ರಾತ್ರಿ ನಿದ್ದೆಯೂ ಇಲ್ಲ.ಸ್ನಾನವೂ ಇಲ್ಲ. ಈಗ ಎಲ್ಲರಿಗೂ ಚಿಂತೆ ಶುರುವಾಯಿತು. ಮುಂದೇನು?.... ಸರಿ ಆಫೀಸಿನವರೆ ಹೋಟೆಲ್ ಬುಕ್ ಮಾಡ್ತಾರಂತೆ ಎಂದು ಸುದ್ದಿ ಎಲ್ಲಿಂದಲೊ ಬಂದಿತ್ತು. ಎಲ್ಲ ಇನ್ಫೋಸಿಸ್ ಉದ್ಯೋಗಿಗಳು ಸುರಕ್ಷಿತವಾಗಿದ್ದರಾ? ಎಂದು ಕಂಪನಿ ವಿಚಾರಣೆ ನಡೆಸಿತ್ತು. ಆದರೆ ಎಲ್ಲ ಹೋಟೆಲ್ ಗಳಲ್ಲೂ ಕರೆಂಟ್ ನೀರು ಇರಲಿಲ್ಲ. ಅಲ್ಲಿ ಹೋಗಿ ಮಾಡುವದೇನು? ಕಂಪನಿಯವರೇ ಒಂದು ದಿನ ಊಟ ತರಿಸಿಕೊಟ್ಟರು. ಅಂತೂ ಎರ್‍ಅಡು ದಿನವಾದಮೇಲೆ ಕರೆಂಟ್ ಬಂತು. ಗ್ಯಾಲ್ವಸ್ಟನ್ ಮತ್ತು ಹ್ಯೂಸ್ಟನ್ ಕೆಲವು ಭಾಗಗಳು ನಿರ್ಣಾಮವಾಗಿತ್ತು.



ನವೆಂಬರ್ ೨೦; ಇತ್ತೀಚೆಗಂತೂ ಯಾವುದೂ ಹೊಸತಲ್ಲ ಎಲ್ಲ ಮಾಮೂಲು ದಿನಚರಿ ಅನ್ನಿಸತೊಡಗಿತ್ತು. ಇನ್ಫೋಸಿಸ್ ಮತ್ತೊಂದು ಪಾರ್ಟಿ, ಒಂದು ಹುಟ್ಟು ಹಬ್ಬದ ಪಾರ್ಟಿ ದೀಪಾವಳಿ ಪಾರ್ಟಿ ಹೀಗೆ ಹಲವು ಪಾರ್ಟಿಗಳು ಆಗಿಹೋದವು. ಈಗ ನನಗೆ ಹಲವರ ಪರಿಚಯವಾಗಿತ್ತು. ಭಾಷೆಯ ಸಮಸ್ಯೆಯೂ ಕಡಿಮೆ ಆಗಿತ್ತು. ಆದ್ದರಿಂದ ಪಾರ್ಟಿ ಎಂದರೆ ಖುಷಿ.ಐದಾರು ಕುಟುಂಬಗಳು ಸೇರಿಕೊಂಡು ಅಗಾಗ ಪಿಕ್-ನಿಕ್ ಮಾಡುತ್ತಿದ್ದೆವು. ಒಬ್ಬೂಬ್ಬರು ಒಂದೊಂದು ಅಡಿಗೆ ಮಾಡಿಕೊಂಡು ಹೋಗುವುದು, ಎಲ್ಲರೂ ಸೇರಿ ಆಡುವುದು ತಿನ್ನುವುದು,ಹರಟೆ ಎಲ್ಲವೂ ಚೆನ್ನಾಗಿತ್ತು. ಮಕ್ಕಳಂತೂ ತುಂಬಾ ಕುಷಿಪಡುತ್ತಾರೆ.



ನವೆಂಬರ್ ೨೦ ನಾಲ್ಕು ದಿನದ ಲಾಸ್ ಎಂಜಲಿಸ್ ಪ್ರವಾಸಕ್ಕೆ ಹೋಗಿ ಬಂದೆವು. ಮೊದಲನೇ ದಿನ "ಡಿಸ್ನಿ ಲ್ಯಾಂಡ್"ಗೆ ಹೋದೆವು. ಮಿಕ್ಕಿ ಮೋಂಸ್ ತರತರದ ಆಟಗಳು ಸಿಂಧೂರ್ ಕುಷಿ ಪಟ್ಟ. ಎರಡನೇ ದಿನ ಯುನಿರ್ವಸಲ್ ಸ್ಟುಡಿಯೊಕ್ಕೆ ಹೋದೆವು.









ಇದು ನಮ್ಮ ರಾಮೋಜಿರಾವ್ ಫ಼ಿಲ್ಮ್ ಸಿಟಿಯ ತರ ಆದರೆ ಇದಕ್ಕಿಂತ ತುಂಬ ಚೆನ್ನಾಗಿದೆ.ಇಲ್ಲಿ ಮೊದಲನೆಯದಾಗಿ ಸ್ಟುಡಿಯೊ ಟೂರಿಗೆ ಹೋದೆವು. ನಮ್ಮನ್ನು ಪುಟಾಣಿ ರೈಲಿನಲ್ಲಿ ಹತ್ತಿಸಿ ಸುತ್ತಾಡಿಸಿದರು. ಸಿನಿಮಾದಲ್ಲಿ ಹೇಗೆ ಚಿತ್ರೀಕರಣ ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತಿದ್ದರು. ಚಿಕ್ಕ ಹಡಗು ಅದು ಸಿನಿಮಾದಲ್ಲಿ ಸಮುದ್ರ ಮಧ್ಯ ಹೋಗುತ್ತಿರುವ ದೊಡ್ಡ ಹಡಗಿನಂತೆ ತೋರಿಸಿದ್ದಾರೆ. ನಾವು ದಾಟಿದಕೂಡಲೆ ಸೇತುವೆ ಮುರಿದು ಬಿತ್ತು. ಕಾರ್ ಬೆಂಕಿ ಹೊತ್ತಿಕೊಂಡು ಮೇಲಕ್ಕೆ ಸಿಡಿಯಿತು. ದೊಡ್ಡ ಟ್ರೆನಿಗೆ ಬೆಂಕಿ ಹೊತ್ತಿ ಉರಿಯಿತು. ಒಂದು ಬೀದಿಯಲ್ಲಿ ರೋಂ ತರದ ಮನೆಗಳು, ಇನ್ನೊಂದರಲ್ಲಿ ಇಂಗ್ಲೆಂಡ್ ತರದ ಮನೆಗಳು, ಯಾವುದು ನಿಜವಲ್ಲ. ಎಲ್ಲ ಸಿನಿಮಾ ಚಿತ್ರೀಕರಣಕ್ಕಾಗಿ ಮಾಡಿಟ್ಟಿದ್ದರು. ಇದಾದ ನಂತರ ಜುರಾಸಿಕ್ ಪಾರ್ಕ್. ನಮ್ಮನ್ನು ಪುಟಾಣಿ ಬೊಟಿನಲ್ಲಿ ಹತ್ತಿಸಿ ಕರೆದುಕೊಂಡು ಹೋಗುತ್ತಾರೆ. ಅಲ್ಲೆಲ್ಲ ಡೈನೊಸಾರಗಳು ಧಡ್ ಎಂದು ಎದ್ದು ನಿಂತುಬಿಡುತ್ತವೆ. ಕೊನೆಯಲ್ಲಿ ದೊಡ್ಡ ಪ್ರಪಾತ ನಮ್ಮ ಬೋಟ್ ಕೆಳಗೆಡೆ ಬೀಳುತ್ತದೆ. ಒಂದು ಕ್ಷಣ ಉಸಿರೆ ನಿಂತುಬಿಟ್ಟಂತಾಗಿತ್ತು ನನಗೆ. ಇನ್ನೊಂದು ಮಮ್ಮಿ ರೈಡ್, ದೊಡ್ಡದಾದ ಪಿರಮಿಡ್ ಅಲ್ಲಿ ಅರೆಬರೆ ಕಳೆಬರಹಗಳು. ಎಲ್ಲ ಅಸ್ತಿಪಂಜರಗಳನ್ನು ದಾಟಿ ಹೋದಮೇಲೆ ಒಂದು ಚಿಕ್ಕದಾದ ಟೈನ್. ಎಲ್ಲಕಡೆಯೂ ಕತ್ತಲು. ನಮ್ಮ ಪಕ್ಕದಲ್ಲಿ ಜನರಿದ್ದಾರೊ ಇಲ್ಲವೋ ಎಂಬಷ್ಟು ಕತ್ತಲು. ಟ್ರೈನ್ ಹೊರಡ ತೊಡಗುತ್ತದೆ. ಅದು ಮಮ್ಮಿಯ ಒಳಗಡೆ ಹೊರಟಿದೆ. ಅಲ್ಲೆಲ್ಲಾ ಅಸ್ತಿ ಪಂಚರಗಳು ನೇತಾಡುತ್ತಿರುತ್ತದೆ. ಅಸ್ತಿಪಂಜರಕ್ಕೆ ಡ್ಯಾಶ್ ಹೋಡ್ತೆ ಬಿಡ್ತಿವೆನೊ ಅನ್ನೊ ಹೊತ್ತಿಗೆ ನಮ್ಮ ಟ್ರೈನ್ ಸಡನ್ ಆಗಿ ಪಕ್ಕಕ್ಕೆ ತಿರುಗುತ್ತದೆ. ಒಂದು ಮಮ್ಮಿ ಅಸ್ತಿ ಪಂಜರವಂತೂ ನಮ್ಮನ್ನು ಅಟ್ಟಿಕೊಂಡು ಬಂದೆ ಬಿಡುತ್ತದೆ, ಅಷ್ಟೇಹೊತ್ತಿಗೆ ನಮ್ಮ ಟ್ರೈನ್ ಅಷ್ಟೇ ಜೋರಾಗಿ ವಾಪಸ್ ಬಂದು ಬಿಡುತ್ತದೆ. ಇಲ್ಲೆಲ್ಲೊ ಮಕ್ಕಳನ್ನು ಒಳಗಡೆ ಬಿಡುವುದಿಲ್ಲವಾದರಿಂದ ಸಿಂಧೂರನನ್ನು ಹೊರಗಡೆಯೇ ಕೂರಿಸಿಕೊಂಡು ಒಬ್ಬರಿರಬೇಕಾಗಿತ್ತು. ಇದರಿಂದಾಗಿ ಇನ್ನೂ ಕೆಲವು ಶೋಗಳು ತಪ್ಪಿ ಹೋದವು. ಕೊನೆಯಲ್ಲಿ ಹೋಗಿದ್ದು ಹರರ್ ಷೋ. ಸಿಂಧೂರನ ಜೊತೆ ಗಣಪತಿ ಹೊರಗಡೆ ಇದ್ದ. ನಾನು ಅವರ ಸ್ನೇಹಿತ ದಂಪತಿಗಳೊಡನೆ ಒಳಗಡೆ ಹೋದೆ. ಒಳಗಡೆ ಹೋದರೆ ಅಲ್ಲಿ ಇರುವುದೇನು....ಎತ್ತ ನೋಡಿದರೂ ಕತ್ತಲು......ಗುಹೆ..ಓಣಗಿದ ಕಳೆಬರಹಗಳು, ಎಲುವು, ಮೂಳೆ, ವಿಚಿತ್ರವಾಗಿ ದೆವ್ವಗಳು ಪ್ರೇತಾತ್ಮಗಳ ಕೂಗು. ಭಯವಾಗಿ ಗಟ್ಟಿಯಾಗಿ ಕೈ ಹಿಡಿದುಕೊಂಡೆವು. ನಿಧಾನಕ್ಕೆ ಮುಂದೆ ಹೋದೆವು....ಕತ್ತಲೆಯಲ್ಲೆಲ್ಲೊ ಅವಿತಿದ್ದ ಭೂತ ಹಾ! ಎಂದು ಹಾರೆ ಬಿಟ್ಟಿತು ನಮ್ಮಮೇಲೆ. ತಪ್ಪಿಸಿಕೊಂಡು ಮುಂದೆ ಓಡಿದೆವು. ನಮ್ಮ ಮುಂದೆ ಒಂದು ಅಮೇರಿಕನ್ ದಂಪತಿಗಳು ಹೊರಟಿದ್ದರು..ಅವರ ಬೆನ್ನಹಿಂದೆಯೇ ಹೊರಟೆವು. ಆ ಕತ್ತಲಲ್ಲಿ ಭೂತಗಳು ಎಲ್ಲಿಲ್ಲಿಂದ ಬರುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ತುಂಬ ಭಯಾನಕ. ಹೊರಗಡೆ ಬಂದರೆ ಸಾಕು ಎಂಬಂತಿತ್ತು ನಮ್ಮ ಪರಿಸ್ಥಿತಿ.


ಮೂರನೇ ದಿನ ಸ್ಯಾಂಡಿಯಾಗೊಕ್ಕೆ ಹೋದೆವು. ಸೀ-ವರ್ಡ್ (ಸಮುದ್ರ ಜಗತ್ತು) ಇದು ಕೂಡ ತುಂಬ ಚೆನ್ನಾಗಿತ್ತು. ಡಾಲ್ಫಿನ್ ಗಳ ಡಾನ್ಸ್, ಸೀಲ್, ಪೆಂಗ್ವಿನ್ ಗಳು, ತರ-ತರದ ಮೀನುಗಳು ಎಲ್ಲವೂ ಚೆನ್ನಾಗಿತ್ತು. ನಾಲ್ಕನೇ ದಿನ ಹಂಟಿಂಗಟನ್ ಸಮುದ್ರ ಕಿನಾರೆಗೆ ಹೋದೆವು. ಒಂದು ಸೀಲಿನ ಮರಿ ಗುಂಪು ತಪ್ಪಿಸಿ ಕೊಂಡು ದಡಕ್ಕೆ ಬಂದಿತ್ತು. ಸಮುದ್ರದ ನೀರಂತೂ ಮುಟ್ಟಲಾರದಷ್ಟು ತಣ್ಣಗೆ ಕೊರೆಯುತ್ತಿತ್ತು. ಆದರೂ ಪೆಸಿಫಿಕ್ ಸಾಗರದ ನೀರು ಎಂದು ಬಾವುಕತೆಗೆ ಒಂದು ಚೂರು ಬಾಯಿಗೂ ಹಾಕಿ ಕೊಂಡೆ. ಇಲ್ಲಿನ ಮರಳು ನಮ್ಮ ಸಮುದ್ರಕ್ಕೆ ಹೋಲಿಸಿದರೆ ತುಂಬ ಬಿಳಿ ಬಣ್ಣ. ನಂತರ ವಿಮಾನಿನ ಮೇಲೆ ವಾಪಸ್ ಪ್ರಯಾಣ.


ನಂತರ ಒಂದು ದಿನ ಮೂರು ಕುಟುಂಬಗಳು ಸೇರಿ "ನಾಸಾ"ಕ್ಕೆ ಹೋಗಿ ಬಂದೆವು. ರಾಕೆಟ್ ಉಡಾವಣೆ, ಚಂದ್ರ ಲೋಕದ ಎಲ್ಲ ವಿವರಣೆ ಜೊತೆಗೆ ಚಂದ್ರನಿಂದ ತಂದ ಒಂದು ಕಲ್ಲನ್ನು ಎಲ್ಲರಿಗೂ ಮುಟ್ಟಲು ಅವಕಾಶವಿತ್ತು. ನಾವು ಮುಟ್ಟಿದೆವು.


ಡಿಸೆಂಬರ್೧ ನವೆಂಬರ್ ೨೭-೨೮-೨೯-೩೦ ನಾಲ್ಕು ದಿನ ರಜೆ ಇತ್ತು. ಥ್ಯಾಂಗ್ಸ್-ಗಿವಿಂಗ್-ಡೇ ಇದು ಇಲ್ಲಿನ ಒಂದು ಹಬ್ಬ. ೨೮ನೇ ಶುಕ್ರವಾರವನ್ನು ಕಪ್ಪು ಶುಕ್ರವಾರ(ಬ್ಲಾಕ್-ಫ್ರೈಡೇ) ಎಂದು ಕರೆಯುತ್ತಾರೆ. ಆದಿನ ಎಲ್ಲ ಕಡೆಯೂ ರಿಯಾಯ್ತಿ ಮಾರಾಟಗಳಿರುತ್ತವೆ. ಬೆಳಗಿನಜಾವ ೨-೩ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಮೊದಲು ಹೋದವರಿಗೆ ಹೆಚ್ಚಿನ ರಿಯಾಯಿತಿ. ಅದಕ್ಕಾಗಿ ರಾತ್ರಿಯಿಂದಲೆ ಅಲ್ಲಿ ಕಾಯುವವರು ಇರುತ್ತಾರೆ. ಆದರೆ ತುಂಬ ಚಳಿ. ನಾಲ್ಕು ದಿನ ರಜೆಯಲ್ಲಿ ಒಂದು ದಿನ ಗ್ಯಾಲ್ವಸ್ಟನ್ನಿಗೆ ಹೊರಟೆವು. ಇದು ಸಮುದ್ರ ಮಧ್ಯದಲ್ಲಿರುವ ಒಂದು ದ್ವೀಪ. ಇದಕ್ಕೆ ಹೋಗಲು ಸೇತುವೆ ಇದೆ. ಇದೊಂದು ಪ್ರವಾಸಿ ಸ್ಥಳ. ಆದರೆ "ಐಕಿ" ಚಂಡಮಾರುತದಿಂದಾಗಿ ಎಲ್ಲವೂ ಹಾಳಾಗಿತ್ತು. ಎಲ್ಲಿ ನೋಡಿದರೂ ಮುರಿದು ಬಿದ್ದ ಮನೆ, ತ್ಯಾಜ್ಯ ವಸ್ತುಗಳು, ಮುರಿದಬಿದ್ದ ಮರಗಳು, ಚಂಡ ಮಾರುತ ಬಂದುಹೋಗಿ ೨-೩ ತಿಂಗಳು ಕಳೆದಿದ್ದರೂ ಇನ್ನೂ ಕುರುಹುಗಳು ಹಾಗೆ ಬಿದ್ದಿದ್ದವು. ಮೂರು ಕುಟುಂಬಗಳು ಸೇರಿ ಅವರವರ ಕಾರಿನಲ್ಲಿ ಅವರವರು ಹೋಗಿದ್ದೆವು. ಎಲ್ಲ ನೋಡಿಯಾದಮೇಲೆ ವಾಪಸ್ ಹೊರಡಬೇಕೆಂದು ಕಾರಿನಬಳಿ ಬಂದರೆ ಕಾರ್ ಪಂಚರ್ ಆಗಿತ್ತು. ಇಲ್ಲಿ ನಮ್ಮಲ್ಲಿಯ ತರ ಮೆಕ್ಯಾನಿಕಲ್ ಗಳು ಕರೆದಲ್ಲಿಗೆ ಬರುವುದಿಲ್ಲ. ಒಂದು ವಾರದಮೊದಲೆ ಅಪಾಂಟ್-ಮೆಂಟ್ ತೆಗೆದುಕೊಳ್ಳಬೇಕು. ಶನಿವಾರ ಭಾನುವಾರವೆಂದರೆ ಸಾರ್ವತ್ರಿಕ ರಜೆ. ಹೀಗೆ ಟೈಯರ್ ಪಂಚರ್ ಎಂದು ನಮ್ಮ ಕಾರಿದ್ದಲ್ಲಿಗೆ ಕರೆದರೆ ೨೫-೩೦ ಸಾವಿರ ಗ್ಯಾರೆಂಟಿ. ಅದಕ್ಕಾಗಿ ಇಲ್ಲಿ ಇನ್ನೊಂದು ವಿಮಾ ಪಾಲಿಸಿ. ಕಾರು ಮಧ್ಯ ದಾರಿಯಲ್ಲಿ ಕೆಟ್ಟು ನಿಂತರೆ ಬಂದು ಸರಿ ಮಾಡುತ್ತಾರೆ, ಇಲ್ಲವಾದರೆ ಗ್ಯಾರೆಜಿಗೆ ಮುಟ್ಟಿಸಿ ಕೊಡುತ್ತಾರೆ. ನಾವು ಈ ವಿಮಾ ಪಾಲಿಸಿಯನ್ನು ತಿಂಗಳು ಹಿಂದಷ್ಟೇ ಕೊಂಡಿದ್ದೆವು. ಆದ್ದರಿಂದ ಪೋನಾಯಿಸಿದಾಗ ಬಂದು ಬೇರೆ ಟೈರ್ ಹಾಕಿಕೊಟ್ಟ. ಆದರೆ ಟೈಯರಿಗೆ ಗಾಳಿ ಹಾಕಬೇಕಿತ್ತು. ಗ್ಯಾಸ್ ಸ್ಟೇಶನ್ ಹುಡುಕುತ್ತಾ ಹೊರಟೆವು. ೫.೩೦ಕ್ಕೆ ಕತ್ತಲಾಗಿ ಬಿಟ್ಟಿತ್ತು. ನಮಗೆ ಕಾರಿನೊಂದಿಗೆ ವಾಪಸ್ ಹೋಗಲೇ ಬೇಕಿತ್ತು. ಹೊಟೇಲುಗಳು ತಿಂಗಳು ಮೊದಲೇ ಬುಕ್ಕಾಗಿರುತ್ತವೆ. ಸಿಗುವ ಸಾಧ್ಯತೆಗಳೇ ಇಲ್ಲ. ಈ ಟೈಯರಿನಲ್ಲಿ ಅರವತ್ತು ಕಿ.ಮಿ ವೇಗಕ್ಕಿಂತ ಹೆಚ್ಚು ಹೋಗುವಂತಿರಲಿಲ್ಲ. ಬರುವಾಗ ೯೦-೧೦೦ಕಿ.ಮಿ ವೇಗದಲ್ಲಿ ಬಂದಿದ್ದೆವು. ಈಗ ಇದು ತುಂಬ ನಿಧಾನ ಎನ್ನಿಸುತಿತ್ತು. ಇಲ್ಲಿನ ವ್ಯವಸ್ಥೆಯನ್ನು ತೆಗಳುತ್ತಲೇ ಹೊಂದಿಕೊಂಡು ಬಿಟ್ಟಿದ್ದೇವೆ ಎಂದು ಇಬ್ಬರಿಗೂ ಅನ್ನಿಸಿತ್ತು.


ಇಲ್ಲಿ ಮಕ್ಕಳಿಗೆ ವಿಶೇಷ ಭದ್ರತೆ. ಮಕ್ಕಳು ಎನಾದ್ರೂ ಸುಟ್ಟುಕೊಂಡರೆ ಅಥವಾ ಬಿದ್ದು ಪೆಟ್ಟಾದರೆ ಅದಕ್ಕೆ ಅಪ್ಪ ಅಮ್ಮ ಜವಾಬ್ದಾರರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡ ಸುಲಭವಲ್ಲ. ಜೊತೆಗೆ ಇದು ಪೋಲಿಸ್ ಕೇಸ್. ಪೋಲಿಸರು ಪಾಲಕರನ್ನು ಜೈಲಿಗೂ ಹಾಕಬಹುದು. ಸಾರ್ವತ್ರಿಕ ಸ್ಥಳಗಳಲ್ಲಿ ಅಲ್ಲಲ್ಲಿ ಸೂಕ್ಷ ಕ್ಯಾಮರಾಗಳು ಇರುತ್ತವೆ. ಮಕ್ಕಳನ್ನು ಶಿಕ್ಷಿಸುವುದು ಕಂಡರೆ ಇದು ಅಪರಾಧ. ಪಾಲಕರನ್ನು ಶಿಕ್ಷಿಸಲಾಗುತ್ತದೆ. ಮಕ್ಕಳನ್ನು ಶಿಶು ಪಾಲನಾ ಸಂಸ್ಥೆಗೆ ಕೊಡಲಾಗುತ್ತದೆ. ಮುಂದೆ ಮಕ್ಕಳನ್ನು ಶಿಶು ಪಾಲನಾ ಸಂಸ್ಥೆ(ಚೈಲ್ಡ್ ಕೇರ್) ಸಾಕುತ್ತದೆ. "ಮಕ್ಕಳಮೇಲೆ ಕೋಪ ಬಂದರೆ ಚೆನ್ನಾಗಿ ಚಿವುಟಿ ಬಿಡಬೇಕು ಆಗ ಕ್ಯಾಮರಾದಲ್ಲಿ ಗೊತ್ತಾಗಲ್ಲ" ಎಂದು ಯಾರೋ ಸ್ನೇಹಿತರು ಉಪಾಯವನ್ನೂ ಹೇಳಿದ್ದರು.


೯೧೧-ಇದು ಇಲ್ಲಿನ ಒಂದು ಉತ್ತಮ ವ್ಯವಸ್ಥೆ. ಎನೇ ಅಪಾಯವಿರಲಿ, ಈ ನಂಬರಿಗೆ ಡಯಲ್ ಮಾಡಿದರೆ ತಕ್ಷಣ ಸಹಾಯ ಸಿಗುತ್ತದೆ. ಅಪಘಾತ, ಕಳ್ಳತನ, ದರೋಡೆ, ಅನಾರೋಗ್ಯ ಹೀಗೆ ಎಲ್ಲ ಎಮರ್ಜಸ್ನಿಗಳಿಗೂ ಯಾವ ಚಾರ್ಜ್ ಇಲ್ಲದೇ ಸಹಾಯ ಸಿಗುತ್ತದೆ.
ನಂದಿತಾ ಹೇಳಿದ್ದು: ಯಾರೋ ಸ್ನೇಹಿರತ ಮಗ ಅಪ್ಪ ಬೈದಿದ್ದಕ್ಕೆ "ನನಗೆ ತಂದೆ ತಾಯಿ ಮೆಂಟಲಿ ಟಾರ್ಚರ್ ಮಾಡ್ತ ಇದ್ದಾರೆ" ಎಂದು ೯೧೧ಗೆ ಕಾಲ್ ಮಾಡಿ ಹೇಳಿದನಂತೆ. ತಕ್ಷಣವೇ ಬಂದ ಪೋಲಿಸರು ಅಪ್ಪನನ್ನು ಎರಡುದಿನ ಜೈಲಿನಲ್ಲಿ ಇಟ್ಟರಂತೆ. ಆ ಅಪ್ಪ ಜೈಲಿಂದ ಹೊರಗೆ ಬಂದ ತಕ್ಷಣವೇ ಭಾರತಕ್ಕೆ ಹೋರಡಲು ಟಿಕೆಟ್ ಬುಕ್ ಮಾಡಿದನಂತೆ. ಭಾರತಕ್ಕೆ ಬಂದು ಇಳಿತಾ ಇದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಆ ಮಗನಿಗೆ ಸರಿಯಾಗಿ ನಾಲ್ಕು ಇಕ್ಕದಂತೆ. ಪಾಪ ಅಲ್ಲಿತನಕ ಹೇಂಗೋ ಸಿಟ್ಟು ಕಟ್ಟಿ ಇಟ್ಕೊಂಡಿದ್ದ ಆ ಅಪ್ಪ.


ಜನವರಿ ೧೦- ಇಲ್ಲಿಗೆ ಬಂದು ೮-೯ ತಿಂಗಳುಗಳೇ ಕಳೆದಿತ್ತು. ನಮ್ಮ ಬಾಡಿಗೆ ಮನೆಯ ಲೀಸ್ ಅವಧಿಯೂ ಮುಗಿದಿತ್ತು. ಅಲ್ಲಿಗೆ ಸರಿಯಾಗಿ ಗಣಪತಿಯ ಆಫೀಸೂ ಸ್ಟಾಫರ್ಡ್ ನಿಂದ ಹ್ಯೂಸ್ಟನಿಗೆ ಬದಲಾಯಿದ್ದರು. ಮತ್ತೆ ಅಪಾರ್ಟ್ ಮೆಂಟ್ ಹುಡುಕುವ ಕೆಲಸ. ಇಲ್ಲಿ ಮಕ್ಕಳಿದ್ದರೇ ಡಬಲ್ ಬೆಡ್ ರೊಮ್ ಮನೆ ಮಾಡ್ಲೇ ಬೇಕು. ಮೊದಲಿರುವ ಅಪಾರ್ಟ್-ಮೆಂಟಿನಲ್ಲಿ ಅದು ಹೇಗೋ ಸಿಂಗಲ್ ಬೆಡ್ ರೂಮ್ ದಕ್ಕಿಸಿಕೊಂಡಿದ್ದೆವು. ಅಪಾರ್ಟ್-ಮೆಂಟ್ ಹುಡುಕಲು ಹೋದಲ್ಲೆಲ್ಲ ಸಿಂಧೂರನನ್ನೂ ನೋಡಿ ಡಬಲ್ ರೂಮ್ ಇರುವಮನೆಯನ್ನೇ ಕೊಡುವುದು ಎಂದರು. ಮಕ್ಕಳನ್ನೂ ತೋರಿಸಲೇಬೇಡಿ ಎಂದು ಯಾರೋ ಭಾರತೀಯರು ಉಪಾಯವನ್ನೂ ಹೇಳಿಕೊಟ್ಟರು. ಅಂತೂ ಹೊಸಮನೆಗೆ ಬಂದಾಗಿತ್ತು. ಇದು ಸ್ವಲ್ಪ ಸಿಟಿಯ ಮಧ್ಯ ಭಾಗದಲ್ಲಿತ್ತು. ಆಗಾಗ ಕಾಣುವ ಜನ, ಬಸ್ ನೋಡಿ ಸಿಂಧೂರನಿಗೂ,ನನಗೂ ಖುಷಿ ಆಗಿತ್ತು. ಇಲ್ಲಿ ನಡೆಯುವವರಿಗೆ ಮೊದಲ ಆದ್ಯತೆ. ಜನರು ರೋಡ ದಾಟುತ್ತಿದ್ದರೆ ಅವರಿಗಾಗಿ ಕಾದು, ಅವರು ದಾಟಿದಮೇಲಷ್ಟೇ ಕಾರು ಹೊರಡಬೇಕು. ಇನ್ನು ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ದಾಟುವಂತಿಲ್ಲ. ಸಿಗ್ನಲ್ ಗಳಲ್ಲಿ ನಡೆಯುವವರಿಗೆಂದೇ ಹಾಕುವ ಗ್ರೀನ್ ಸಿಗ್ನಲ್ ಬಿದ್ದಾಗಲಷ್ಟೇ ದಾಟಬೇಕು.



7 comments:

  1. Hi Shantakka...It took me an almost 2 hour to read ur blog completly. So u can undestand what would be my comments. Have you ever seen me as reading continously 2 hours..? Its nice attempt to begin with blog.and ofcourse your introduction also good. some of the matter u discussed is quite intersting like u menctined about cyclons..and rapid climate changes..and some of regulations....but.........


    there were some things which is realy unintersting...so try to avoid those things...and if possible try to increase font size..and write description under each photo if necessary

    So all I can say is sweetly done..carry on..

    bye..

    Mabanna

    ReplyDelete
  2. ಶಾಂತಲಾ,
    ಅಭಿನಂದನೆಗಳು. ಒಂದೇ ದಿನಕ್ಕೆ ಕಾದಂಬರಿ ಬರೆದು ಬಿಟ್ಯ ಹೇಗೆ? ಒಳ್ಳೆ ಪ್ರಯತ್ನ ಸಹುರು ಮಾಡಿದ್ದಕದಕ್ಕೆ ಶುಭಾಷಯ.
    ಇನ್ನೂ ದಾಂಡೇಲಿಯಲ್ಲಿ ಇದ್ದಿ. ಮನೆಗೆ ಹೋದ ತಕ್ಷಣ ೂ ಊದ್ದ ಕಮೆಂಟ್ಸ ಬರೀತಿ.
    ಸದ್ಯಕ್ಕೆ,
    1. sub headings ಹಾಕಿ ಬೇರೆ ಬೇರೆ ಅಧ್ಯಾಯ ಮಾಡು. ಓದಲೆ ಚೊಲೋ ಅಗ್ತು.
    2. ಇನ್ನೂ ಒಂದಷ್ಡು ಹೆಚ್ಚು ಫೋಟೋ ಹಾಕು.
    3. ನಿನ್ನ ಕನಸಿನ ಆಮೇರಿಕಅಕ್ಕೆ , ನೀ ಕಂಡ ಅಮೇರಿಕಾಕ್ಕೆ ಇರೋ ವ್ಯತ್ಯಾಸ ಬರೆ.
    ಉಳಿದದ್ದೆಲ್ಲ ನಂತರ,
    ಸೀಮಧೂರ ಎಂತಾ ಮಾಡ್ತ?
    ನಿನ್ನ ಬಾಲಣ್ಣ

    ReplyDelete
  3. Hey Shantakka I forgot to tell you..that name you have selected for blog is very impressive..damm cool..and its a multi-mean word. I wonder who must have suggested name?...whoever be that..hats off for him....


    Mabanna

    ReplyDelete
  4. Hi shantakka why you stopped writing..? write some more experiences...

    ReplyDelete
  5. Hi Shantala,
    Teeraa achaanakkaagi ee blogige baralu adara hesarina aakarshaneye kaarana!.A good name,& also your introduction & starting too.
    Doddadaadaroo, oodatodagidante poorna oodiyebiduva anisiddantoo nija.Anteye pratikriyisalebekenisiddoo nijave!.(Ittichegaste 'blogs'parichayavaagiddu,this is my ever first comment written by me to a blog!.)
    Sarala but oodisikonduhoguva shaili bahala ishtavaayitu.Kelavukade ninna anisikegalannu vyaktapadisida reeti tumbaa interesting aagittu(Kariya gaganasakhiya mukhada varnane...etc.)
    Idiya barahavannu eradu-mooraagi vingadisabahuditteno anisitu.
    Totally interesting writeup.
    Keep it up.
    With well wishes,
    Nagendra Muthmurdu.

    ReplyDelete
  6. ಹಾಯ್ ನಾಗೇಂದ್ರಣ್ಣ,
    ನಿನ್ನ ಕಾಮೆಂಟ್ಸ್ ನೋಡಿ ತುಂಬಾ ಖುಷಿ ಆತು. ಧನ್ಯವಾದಗಳು. ನಿಜ ಹೇಳವು ಅಂದ್ರೆ ನಾನು ಬ್ಲಾಗ್ ಬರಿತಾ ಇದ್ದಿ ಅನ್ನೋದನ್ನು ಯಾರಿಗೂ ಹೇಳಿದ್ನಿಲ್ಲೆ. ಎನೋ..ಸಂಕೋಚ. ಅಥವಾ ನನ್ನ ಬರವಣಿಗೆಯಮೇಲೆ ನನಗೆ ಭರವಸೆ ಇಲ್ಲವೇನೊ.....ಆದ್ರೆ..ಯಾರದ್ರೂ...ಓದಿ ಕಾಮೆಂಟ್ಸ್ ಕೊಟ್ಟರೆ ಮಾತ್ರ..ಸಿಕ್ಕಾಪಟ್ಟೆ ಖುಷಿ ಆಗಿಹೋಗ್ತು....

    ReplyDelete
  7. ಮೇಡಂ ತುಂಬ ಚೆನ್ನಾಗಿ ಬರೆದಿದ್ದೀರಿ . ಓದಿಸಿಕೊಂಡೇ ಹೋಯಿತು ನಡುವೆ ನಿಲ್ಲಿಸುವ ಹಾಗೇ ಇಲ್ಲ! ನಿಮ್ಮ ಬರಹ ಶೈಲಿ , ಹಾಸ್ಯ ಚೆನ್ನಾಗಿದೆ. ಮತ್ತೂ ಬರೆಯಿರಿ. ನನಗೆ ಕೂತಲ್ಲೇ ಅಮೇರಿಕಾ ತೋರಿಸಿದಿರಿ. ಧನ್ಯವಾದಗಳು .

    ReplyDelete